Jan 12, 2017

ಎಲೆ ಮಾನವಾ

ನೀನಾರಿಗಾದೆಯಾ ಎಲೆ ಮಾನವಾ- ಎಂದು ಪ್ರಶ್ನಿಸುವ ನೈತಿಕತೆ ಸಾಧುತ್ವದ ಪ್ರತಿರೂಪವಾದ ಗೋಮಾತೆಗಲ್ಲದೆ ಇನ್ನಾರಿಗಿದ್ದೀತು? ತಣ್ಣನೆ ಹಾಗೂ ಸಣ್ಣನೆ ದನಿಯಲ್ಲಿ ತನ್ನ ತ್ಯಾಗವನ್ನು ಹೇಳಿಕೊಳ್ಳುವ ಹಸು, ಅದೇಕಾಲಕ್ಕೆ ತನ್ನ ಬದುಕಿನೆದುರು ಕುಬ್ಜನಾಗುವ ಮನುಷ್ಯನ ಅಂತರಂಗ ಶೋಧನೆಗೆ ಪ್ರೇರೇಪಿಸುತ್ತದೆ. ನಾಲಗೆಗಳಲ್ಲಿ ಹೊರಳುತ್ತ ಉಳಿದುಕೊಂಡಿರುವ ‘’, ಮೇಲ್ನೋಟಕ್ಕೆ ದಾಸರ ಪದದಂತೆ ಕಾಣುತ್ತದೆ. ಇದನ್ನು ಜನಪದ ಗೀತೆಯೆಂದು ಅನೇಕರು ನಂಬಿದ್ದಾರೆ. ಇಂಥ ಅದ್ಭುತ ಗೀತೆಯನ್ನು ಬರೆದ ಕವಿ ಎಸ್‌.ಜಿ.ನರಸಿಂಹಾಚಾರ್ಯ. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ‘’ ನೀತಿಪಾಠ!
ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು ।।1।।

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ ।।2।।

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ ।।3।।

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ ।।4।।

ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯಾ ಎಲೆ ಮಾನವಾ ।।5।।