Jan 12, 2016

ವಿವೇಕ ವಾಣಿ

ಏಳಿ ಎದ್ದೇಳಿ .. ಗುರಿ ಮುಟ್ಟುವ ವರೆಗೂ ನಿಲ್ಲದಿರಿ ಎನ್ನುವ ಸಿಂಹ ಘರ್ಜನೆ  ಭರತ ಖಂಡದಲ್ಲಿ ಜನಿಸಿ ಇಂದಿಗೆ 153 ವರ್ಷಗಳು ಕಳೆದಿವೆ.
ಆ ಸಿಂಹ ಘರ್ಜನೆಯ ಉಕ್ತಿಗಳು...

1. ಎಡಬಿಡದೆ ಒಳ್ಳೆಯದನ್ನೇ ಮಾಡುತ್ತಾ ಹೋಗಿ;
ಒಳ್ಳೆಯದನ್ನೇ ಆಲೋಚಿಸುತ್ತಾ ಇರಿ.
ನಮ್ಮ ಕೀಳು ಸ್ವಭಾವವನ್ನು ಅಡಗಿಸುವುದಕ್ಕೆ ಇದೊಂದೇ ದಾರಿ. ಯಾರನ್ನೂ ಕೆಟ್ಟವರೆಂದು ಹೇಳಬೇಡಿ, ಏಕೆಂದರೆ ಅವರು ಕೆಲವು ಅಭ್ಯಾಸಗಳ ಬಲದಿಂದ ಒಂದು ಶೀಲವನ್ನು ಪಡೆದಿದ್ದಾರೆ. ಈ ಶೀಲವನ್ನು ನಾವು ಬೇರೆ ಉತ್ತಮ ಅಭ್ಯಾಸ ಬಲದಿಂದ ತಿದ್ದಬಹುದು. ಶೀಲವೆಂದರೆ ಪುನರಾವರ್ತಿಸಿದ ಅಭ್ಯಾಸ.
ಮತ್ತೆ ಮತ್ತೆ ರೂಢಿಸಿಕೊಂಡ ಒಳ್ಳೆಯ ಅಭ್ಯಾಸಗಳು ಮಾತ್ರ ನಮ್ಮ ಶೀಲವನ್ನು ತಿದ್ದಬಹುದ.

2. ಇತರರ ಕೆಟ್ಟತನವನ್ನೇ ಗಮನಿಸುತ್ತಿರಬೇಡಿ.
ದುಷ್ಟತನವು ದೌರ್ಬಲ್ಯದಿಂದ, ಅಜ್ಞಾನದಿಂದ ಆದುದು.
ಜನರಿಗೆ ಅವರು ದುರ್ಬಲರು ಎಂದು ಹೇಳಿ ಪ್ರಯೋಜನವೇನು?
ಟೀಕೆ ಮಾಡುವುದು, ಧ್ವಂಸ ಮಾಡುವುದು ಇವುಗಳಿಂದ ಪ್ರಯೋಜನವಿಲ್ಲ.
ನಾವು ಅವರಿಗೆ ಮತ್ತಾವುದಾದರೂ ಉತ್ತಮವಾಗಿರುವುದನ್ನು ಕೊಡಬೇಕಾಗಿದೆ.
ಪವಿತ್ರತೆ ನಿಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೇಳಬೇಕು

3. ಪ್ರಪಂಚ ಹೇಡಿಗಳಿಗೆ ಅಲ್ಲ. ಓಡಿಹೋಗಲೆತ್ನಿಸಬೇಡಿ.
ಸೋಲು ಗೆಲುವುಗಳನ್ನು ಗಣನೆಗೆ ತರಬೇಡಿ.
ನಿಃಸ್ವಾರ್ಥರಾಗಿ ಕೆಲಸ ಮಾಡಿ.
ಸತ್ಯ ಸಂಕಲ್ಪ ಮಾಡಿಕೊಂಡು ಎಂದಿಗೂ ಅದರಿಂದ ವಿಚಲಿತರಾಗದ ಮನಸ್ಸು ಗೆಲ್ಲುವುದಕ್ಕಾಗಿಯೇ ಜನ್ಮ ತಾಳಿದೆ ಎಂದು ತಿಳಿಯಿರಿ.

4. ಜೀವನದ ಹೋರಾಟದ ಮಧ್ಯದಲ್ಲಿರಿ.
ನಿದ್ರಿಸುವಾಗ ಅಥವಾ ಒಂದು ಗುಹೆಯಲ್ಲಿರುವಾಗ ಯಾರು ಬೇಕಾದರೂ ಶಾಂತಚಿತ್ತರಾಗಿರಬಹುದು.
ಉನ್ಮತ್ತ ಕರ್ಮದ ಪ್ರಚಂಡ ಸುಂಟರಗಾಳಿಯಲ್ಲಿದ್ದೂ ಕೇಂದ್ರವನ್ನು ಸೇರಬೇಕು.
ನೀವು ಕೇಂದ್ರವನ್ನು ಕಂಡಿದ್ದರೆ ವಿಚಲಿತರಾಗುವುದಿಲ್ಲ.

5. ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ
ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ .

6. ಸದಾ ಶ್ರೇಷ್ಠ ಚಿಂತನೆಗಳಿಂದ ಮನಸ್ಸನ್ನು ತುಂಬಿ. ಸೋಲನ್ನು ಲಕ್ಷಿಸಬೇಡಿ. ಹೋರಾಟ ಮತ್ತು ತಪ್ಪುಗಳ ಲೆಕ್ಕ ಇಡಬೇಡಿ. ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿರಿ, ಸೋಲು ಜೀವನದ ಸೌಂದರ್ಯ

7. ಸ್ವಾರ್ಥದಿಂದ ಕೂಡಿದ ಪ್ರತಿಯೊಂದು ಶಕ್ತಿಯೂ ವ್ಯಯವಾಗಿ ಹೋಗುತ್ತದೆಯೇ ಹೊರತು, ಅದು ಪ್ರತಿಫಲದ ರೂಪದಲ್ಲಿ ನಿಮಗೆಂದಿಗೂ ದಕ್ಕುವುದಿಲ್ಲ.

8. ನಂಬಿ ಅಥವಾ ಬಿಡಿ ಈ ಭೂಮಿ ಎಲ್ಲರಿಗು ವಾಸಿಸಲು ಸಾಕಾಗುವಷ್ಟು
ನೆಲವನ್ನು ಒದಗಿಸಿದೆ. ಆದರೆ ಮನುಷ್ಯ ಮನುಷ್ಯನನ್ನೇ ನಿರಾಶ್ರಿತ ಸ್ಥಿತಿಗೆ ತಳ್ಳುತಿದ್ದಾನೆ.

9. ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ.  ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ.  ಆಗ ಎಲ್ಲ ಆಸೆಗಳೂ ಬಿದ್ದುಹೊಗುವವು

10. ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ - ವಿಚಾರ ಮಾತ್ರ..

11. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ; ಆದರೆ ಯಾವುದಕ್ಕಾದರು ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.

12. ನಿಮಗೆ ಸಹಾಯ ಮಾಡಿದವರನ್ನು ಮರೆಯಬೇಡ, ತಿರಸ್ಕರಿಸುವವರಿಗೆ ಕೆಟ್ಟದ್ದು ಬಯಸಬೇಡ, ನಂಬಿಕೆ ಇಟ್ಟವರಿಗೆ ಮೋಸ ಮಾಡಬೇಡ

13. ಎಲ್ಲಿಯವರೆಗೆ ಮಾನವನು ಇತರರನ್ನು ದೂರಬಲ್ಲನೋ, ಅಲ್ಲಿಯವರೆಗೆ ತನ್ನ ದೋಷ, ದೌರ್ಬಲ್ಯಗಳನ್ನು ಅರಿತುಕೊಳ್ಳಲಾರನು.

14. ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ.
ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ .

15. ಸ್ವಾರ್ಥತೆಯೇ ಪ್ರತಿಯೊಬ್ಬರಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ.
ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೆ.

16. ವಿಕಾಸವೇ ಜೀವನ; ಸಂಕೋಚವೇ ಮರಣ.
ಪ್ರೇಮವೆಲ್ಲಾ  ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ;
ಆದುದರಿಂದ ಪ್ರೇಮವೇ ಬದುಕಿನ ಧರ್ಮ.

17. ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ
ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ.

18. ಬುದ್ಧಿ ಶ್ರೇಷ್ಠವಾದುದು ನಿಜ, ಆದರೆ ಅದರ ಕಾರ್ಯವ್ಯಾಪ್ತಿ ಸೀಮಿತವಾದುದು.
ಸ್ಪೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ  ಸ್ಪೂರ್ತಿಯ ಮೂಲ

19. ಮಹಾತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

20. ಈ ಜ್ಞಾನ ಎಂಬುವುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ಅದೆಲ್ಲವೂ ಒಳಗೇ ಇರುವುದು...
ನ್ಯೂಟನ್ನನು ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ಎಂದು ನಾವು ಹೇಳುತ್ತೇವೆ ಅಲ್ಲವೇ?
ಅದೇನು ಎಲ್ಲಿಯೋ ಒಂದು ಮೂಲೆಯಲ್ಲಿ ಕುಳಿತುಕೊಂಡು ನ್ಯೂಟನ್ನನು ತನ್ನನ್ನು ಕಂಡುಹಿಡಿಯುವುದಕ್ಕೆ ಬರುವನೆಂದು ಕಾಯುತಿದ್ದೀತೇನು? ಅದು ಆತನ ಮನಸ್ಸಿನ್ನಲ್ಲಿಯೇ ಇತ್ತು, ಸಮಯ ಬಂತು, ಆಗ ಅದು ಬದಲಾಯಿತು, ಎಂದರೆ ಆತನಿಗೆ ಜ್ಞಾನ ಹೊಳೆಯಿತು.
ಜಗತ್ತು ಗಳಿಸಿರುವ ಜ್ಞಾನವೆಲ್ಲವೂ ಮನಸ್ಸಿನಿಂದ ಬಂದುದೇ. ಜಗತ್ತಿನ ಅನಂತ ಪುಸ್ತಕ ಭಂಡಾರವೆಲ್ಲ ನಿಮ್ಮ ಮನಸ್ಸಿನಲ್ಲಿಯೇ ಇದೆ.
ಬಾಹ್ಯ ಪ್ರಪಂಚವೆನ್ನುವುದು ಸೂಚನೆ ಮಾತ್ರ, ಅದು ನಿಮ್ಮ ಮನಸ್ಸನ್ನು ವಿಚಾರ ಮಾಡುವಂತೆ ಪ್ರೇರೇಪಿಸುವುದು.

21. ಜಗತ್ತಿನ ಇತಿಹಾಸವು ಶ್ರದ್ಧಾಳುಗಳ ಮೇಲೆ, ಶುದ್ಧ ಚಾರಿತ್ರ್ಯ ಉಳ್ಳವರ ಮೇಲೆ ನಿಂತಿದೆ.
ನಮಗೆ ಅವಶ್ಯವಿರುವುದು ಮೂರು ಸಾಧನಗಳು:
ಅನುಭವಿಸುವ ಹೃದಯ, ಯೋಚಿಸುವ ಮೆದುಳು, ಕೆಲಸ ಮಾಡುವ ಕೈಗಳು.
ನಿಮ್ಮನ್ನು ನೀವೇ ಒಂದು ಅದ್ಭುತ ಶಕ್ತಿಯ ಕೇಂದ್ರವಾಗಿಸಿಕೊಳ್ಳಿ.
ಮೊಟ್ಟಮೊದಲಾಗಿ ಪ್ರಪಂಚದ ಮೇಲೆ ಅನುಕಂಪವಿರಲಿ...
ನಿಮ್ಮ ಮನಸ್ಸು ದ್ವೇಷ ಮತ್ತು ಅಸೂಯ ಭಾವನೆಗಳಿಂದ ಪ್ರತಿಕ್ರಿಯಿಸುತ್ತಿದೆಯೇ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.
ಕಾರಣ ಈ ಜಗತ್ತಿನ ಮೇಲೆ ಜನರು ಸುರಿಸುತ್ತಿರುವ ಟನ್ನುಗಟ್ಟಲೆ ದ್ವೇಷ-ಕೋಪಗಳಿಂದ ಒಳ್ಳೆಯ ಕೆಲಸಗಳೆಲ್ಲಾ ಹಾಳಾಗುತ್ತಿವೆ.
ನೀವು ಪರಿಶುದ್ಧರಾಗಿದ್ದರೆ, ಧೀರರಾಗಿದ್ದರೆ ನೀವು ಒಬ್ಬರೇ ಇಡೀ ಜಗತ್ತಿಗೆ ಸರಿಸಾಟಿ.

23. ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ.  ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.

24. ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ. ಇದು ಉನ್ನತಿಯ ಮೊದಲ ಮೆಟ್ಟಿಲು. ಆದ್ದರಿಂದ ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು.

25. ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದದ್ದು

26. ದಿನಕ್ಕೆ ಒಮ್ಮೆಯಾದರೂ ನಿಮ್ಮ ಜತೆ ನೀವೇ ಮಾತನಾಡಿಕೊಳ್ಳಿ, ಇಲ್ಲವಾದರೆ ಜಗತ್ತಿನ ಅತ್ಯುತ್ತಮ ವ್ಯಕ್ತಿಯೊಂದಿಗಿನ ಸಂಭಾಷಣೆ ಕಳೆದುಕೊಳ್ಳುತ್ತೀರಿ.

27. ಅಶುದ್ಧ ಕ್ರಿಯೆಯಂತೆ ಅಶುದ್ಧ ಕಲ್ಪನೆಯೂ ಕೆಟ್ಟದ್ದು. ನಿಯಂತ್ರಿತ ಆಸೆ ಅತ್ಯುನ್ನತ ಫಲಿತಾಂಶಕ್ಕೆ ದಾರಿ.

28. ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವಕೋಟಿಯ ಸ್ನೇಹಿತ.

29. ಸತ್ಯ ಪ್ರೇಮ ಮತ್ತು ನಿಷ್ಕಪಟದ ಎದುರಿಗೆ ಯಾವುದೂ ನಿಲ್ಲಲಾರದು.
ನೀವು ನಿಷ್ಕಪಟಿಗಳೇ? ಸಾಯುವವರೆಗೂ ಸ್ವಾರ್ಥರಹಿತರಾಗಿದ್ದು ಪ್ರೀತಿಸುವಿರಾ?
ಹಾಗಿದ್ದರೆ ಭಯಪಡಬೇಡಿ. ಮೃತ್ಯುವಿಗೂ ಅಂಜಬೇಡಿ. ಮುನ್ನುಗ್ಗಿ ನನ್ನ ಯುವಕರೇ!
ಇಡೀ ಜಗತ್ತಿಗೇ ಇಂದು ಜ್ಞಾನ ಜ್ಯೋತಿ ಬೇಕಾಗಿದೆ. ಕಾತರತೆಯಿಂದ ಅದನ್ನು ನಿರೀಕ್ಷಿಸುತ್ತಿದೆ!
ಕೇವಲ ಭರತಖಂಡ ಮಾತ್ರ ಅದನ್ನು ಕೊಡಬಲ್ಲದು. ಇಂದ್ರಜಾಲ, ಮಂತ್ರ ತಂತ್ರ ಬೂಟಾಟಿಕೆಗಳನ್ನಲ್ಲ.
ನಿಜವಾದ ಧಾರ್ಮಿಕ ಚೈತನ್ಯದ ಮಹಾತ್ಮೆಯನ್ನು ಅತ್ಯುನ್ನತವಾದ ಆಧ್ಯಾತ್ಮಿಕ ಸತ್ಯಗಳನ್ನು ಭಾರತ ಕೊಡಬಲ್ಲದು.
ಅದಕ್ಕೆ ದೇವರು ಎಲ್ಲ ಸಂಧಿಗ್ಧ ಪರಿಸ್ಥಿತಿಗಳಲ್ಲೂ ಈ ಜನಾಂಗವನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದಿದ್ದಾನೆ.
ಈಗ ಕಾಲ ಒದಗಿ ಬಂದಿದೆ. ನನ್ನ ಕೆಚ್ಚೆದೆಯ ಯುವಕರೇ, ನೀವೆಲ್ಲಾ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮವೆತ್ತಿದ್ದೀರಿ ಎಂಬುದರಲ್ಲಿ ವಿಶ್ವಾಸವಿಡಿ. ನಾಯಿಕುನ್ನಿಗಳ ಬೊಗುಳುವಿಕೆ ನಿಮ್ಮನ್ನು ಹೆದರಿಸದಿರಲಿ. ಅಷ್ಟೇ ಏಕೆ, ಸ್ವರ್ಗದ ಗುಡುಗು ಸಿಡಿಲುಗಳು ನಿಮ್ಮನ್ನು ಕಂಗೆಡಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ!

30. ಇದು ಮಾನವಸಹಜ ದೋಷ. ಸಾಧಾರಣವಾಗಿ ಜನರು ತಪ್ಪನ್ನೆಲ್ಲ ಇತರರ ಮೇಲೆ ಹೊರಿಸುವರು.
ತಪ್ಪಿದ್ದರೆ ದೇವರು ಇಲ್ಲವೇ ದೆವ್ವ ಅಥವಾ ಅದೃಷ್ಟ ಎನ್ನುವರು.
ಅದೃಷ್ಟ ಎಲ್ಲಿದೆ? ಅದೃಷ್ಟ ಯಾವುದು?
"ನಾವು ಬಿತ್ತಿದುದನ್ನು ಬೆಳೆಯುತ್ತೇವೆ. ನಮ್ಮ ಅದೃಷ್ಟಕ್ಕೆ ನಾವೇ ಹೊಣೆ."
ಇತರರನ್ನು ನಿಂದಿಸಬೇಕಾಗಿಲ್ಲ. ಹೊಗಳಬೇಕಾಗಿಲ್ಲ.
ಗಾಳಿ ಬೀಸುತಿದೆ. ಯಾವ ದೋಣಿಗಳು ತಮ್ಮ ಪಟಗಳನ್ನು ಹರಡಿವೆಯೂ ಅವು ಗಾಳಿಗೆ ಮುಂದೆ ಹೋಗುವವು.
ಯಾವುವು ಪಟಗಳನ್ನು ಹರಡಿಲ್ಲವೋ ಅವು ಗಾಳಿಯನ್ನು ಹಿಡಿಯಲಾರವು. ಇದು ಗಾಳಿಯ ತಪ್ಪೇ?

31. ಸುಮ್ಮನೆ ಜಗಳವಾಡಿ, ದೂರಿ ಪ್ರಯೊಜನವೇನು ? ಇದರಿಂದ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಯಾರು ತಮ್ಮ ಭಾಗಕ್ಕೆ ಬಂದ ಸಣ್ಣ ಕೆಲಸಗಳಿಗೆ ಗೊಣಗುತ್ತಾರೂೕ ಅವರು ಎಲ್ಲದಕ್ಕೂ ಗೊಣಗಾಡುವರು; ಯಾವಾಗಲೂ ಗೊಣಗುತ್ತಾ ದು:ಖದಲ್ಲೇ ಜೀವಿಸುವರು. ಅವರು ಮುಟ್ಟಿದ್ದೆಲ್ಲಾ ಹಾಳು.
ಆದರೆ ಒಬ್ಬನು ತನಗೆ ಬಂದ ಕರ್ತವ್ಯವನ್ನು ಚಕ್ರಕ್ಕೆ ಹೆಗಲು ಕೊಟ್ಟು ಮಾಡುತ್ತಾ ಹೋದರೆ ಅವನಿಗೆ ಜ್ಞಾನ ಹೊಳೆಯುವುದು. ಉತ್ತಮೋತ್ತಮ ಕರ್ತವ್ಯಗಳು ಅವನ ಪಾಲಿಗೆ ಬರುವುವು.

32. ಯಾವನಾದರೂ ಮನುಷ್ಯನ ಶೀಲವನ್ನು ನಿಜವಾಗಿಯೂ ಪರೀಕ್ಷೆ ಮಾಡಲು ಬಯಸಿದರೆ,
ಆತನು ಮಾಡುವ ದೊಡ್ಡ ಕಾರ್ಯಗಳಿಗೆ ಗಮನ ಕೊಡಬೇಡಿ. ಒಬ್ಬ ಹೆಡ್ದನು ಕೂಡ ಎಂದಾದರೂ ಒಂದು ಸಮಯದಲ್ಲಿ ಶೂರನಾಗಬಹುದು.
ಮನುಷ್ಯನು ಮಾಡುವ ಸಣ್ಣ ಕಾರ್ಯಗಳನ್ನು ನೋಡಿರಿ.
ಅವೇ ದೊಡ್ಡ ಮನುಷ್ಯನ ನಿಜವಾದ ಶೀಲವನ್ನು ತಿಳಿಸತಕ್ಕಂತಹವು.
ಅತ್ಯಂತ ಕೀಳು ಮನುಷ್ಯನು ಕೂಡ ದೊಡ್ಡ ಅವಕಾಶ ಒದಗಿದಾಗ ಯಾವುದೋ ಒಂದು ಬಗೆಯ ದೊಡ್ಡದಾದ ಕಾರ್ಯವನ್ನು ಮಾಡುವನು.
ಆದರೆ ಯಾರ ಶೀಲ,ಆತ ಎಲ್ಲೇ ಇರಲಿ, ಸರ್ವದಾ ಭವ್ಯವಾಗಿರುವುದೋ ಆತನೇ ನಿಜವಾಗಿಯೂ ಶ್ರೇಷ್ಠವ್ಯಕ್ತಿ.

33. ದ್ವೇಷ ಅಸೂಯೆಗಳನ್ನು ನೀವು ತೋರಿದರೆ ಅದು ಚಕ್ರಬಡ್ಡಿ ಸಹಿತ ನಿಮಗೆ ಹಿಂತಿರುಗಿ ಬರುವುದು.
ಯಾವ ಶಕ್ತಿಯೂ ಅದನ್ನು ತಪ್ಪಿಸಲಾರದು. ಒಂದು ಸಲ ಅದನ್ನು ಚಲಿಸುವಂತೆ ಮಾಡಿದರೆ ಅದರ ಫಲವನ್ನು ಅನುಭವಿಸಬೇಕು. ಇದನ್ನು ನೆನಪಿನಲ್ಲಿಟ್ಟರೆ ನೀವು ಕೆಟ್ಟದನ್ನು ಮಾಡುವುದನ್ನು ತಪ್ಪಿಸುತ್ತದೆ.

34. ಒಂದು ವಿಚಾರ ಆಲೋಚಿಸಿ ನೋಡಿ.
ವ್ಯಕ್ತಿಯು ನಿಯಮವನ್ನು ಮಾಡುವನೋ ಅಥವಾ ನಿಯಮವು ವ್ಯಕ್ತಿಯನ್ನು ಮಾಡುವುದೋ?
ವ್ಯಕ್ತಿಯು ಹಣವನ್ನು ಮಾಡುವನೋ ಅಥವಾ ಹಣವು ವ್ಯಕ್ತಿಯನ್ನು ಮಾಡುವುದೋ?
ವ್ಯಕ್ತಿಯು ಕೀರ್ತಿ ಗೌರವಗಳನ್ನು ಗಳಿಸುತ್ತಾನೋ ಅಥವಾ ಕೀರ್ತಿ ಗೌರವಗಳು ವ್ಯಕ್ತಿಯನ್ನು ಮಾಡುವವೋ?

35. ಮಿತ್ರರೇ! ಮೊದಲು ಮನುಷ್ಯರಾಗಿ, ಆಗ ಉಳಿದುದೆಲ್ಲ ತಮಗೆ ತಾವೇ ನಿಮ್ಮನ್ನು ಅನುಸರಿಸುವುದನ್ನು ನೋಡುವಿರಿ. ಪರಸ್ಪರ ದ್ವೇಷ ಅಸೂಯೆಗಳನ್ನು ತೊರೆಯಿರಿ. ಪರಸ್ಪರರ ವಿರುದ್ಧ ಬೋಗುಳುವುದನ್ನು ನಿಲ್ಲಿಸಿ. ಸದುದ್ದೇಶ, ಸದುಪಾಯ ಮತ್ತು ಸತ್ಸಾಹಾಸಗಳನ್ನೂ ಅವಲಂಬಿಸಿ ಮತ್ತು ಕೆಚ್ಚೆದೆ ಉಳ್ಳವರಾಗಿ. ಮನುಷ್ಯರಾಗಿ ಹುಟ್ಟಿದ ಮೇಲೆ ಸ್ವಲ್ಪವಾದರೂ ಕೀರ್ತಿಯನ್ನು ಇಲ್ಲಿ ಬಿಟ್ಟುಹೋಗಿ.

36. ತಮ್ಮ ಮನಸ್ಸಿಗೆ ತೋಚಿದ್ದನ್ನು ಜನರು ಹೇಳಿಕೊಳ್ಳಲಿ.
ನೀವು ಮಾತ್ರ ನಿಮ್ಮ ದೃಢನಿಶ್ಚಯದಂತೆ ನಡೆಯಿರಿ.
ಜಗತ್ತು ನಿಮ್ಮ ಕಾಲಿಗೆ ಬೀಳುವುದು. ಇದರಲ್ಲಿ ಸಂದೇಹವಿಲ್ಲ.
ಅವರು "ಈ ಮನುಷ್ಯನ ಮೇಲೆ ವಿಶ್ವಾಸವಿಡಿ ಅಥವಾ ಆ ಮನುಷ್ಯನ ಮೇಲೆ ವಿಶ್ವಾಸವಿಡಿ" ಎಂದು ಹೇಳುತ್ತಾರೆ.
ಆದರೆ ಮೊದಲು ನಿಮ್ಮ ಮೇಲೆ ವಿಶ್ವಾಸವಿಡಿ ಎಂದು ನಾನು ಹೇಳುತ್ತೇನೆ.
ನಾವು ಮುಂದುವರಿಯುವ ರೀತಿ ಇದು.
ಮೊದಲು ನಿಮ್ಮಲ್ಲಿ ವಿಶ್ವಾಸವಿರಲಿ. ಎಲ್ಲ ಶಕ್ತಿಯೂ ನಿಮ್ಮಲ್ಲಿದೆ. ಇದನ್ನು ತಿಳಿದುಕೊಳ್ಳಿ.
ಅನಂತರ ಪ್ರಕಟಿಸಿ. "ನಾನು ಎಲ್ಲವನ್ನೂ ಮಾಡಬಲ್ಲೆ" ಎಂದು ಹೇಳಿ.
ಹಾವು ಕಚ್ಚಿದರೂ ಕೂಡ ನಾವು ಮನಸ್ಸಿನಿಂದ ಅದನ್ನು ನಿರಾಕರಿಸಿದರೆ ಅದರ ವಿಷಪರಿಣಾಮವನ್ನು ಹೋಗಲಾಡಿಸಬಹುದು.

ಸಾವಿರದ ವಿವೇಕಾನಂದ......... ಯುವ ದಿನ