May 5, 2015

ಶಾಸನಗಳಲ್ಲಿ ಸಾಂಸ್ಕೃತಿಕ ಅಂಶಗಳು


ಸಂಸ್ಕೃತಿ ಮಾತಿಗೆ ಇಂದು ಇರುವ ಜನಪ್ರಿಯ ಗ್ರಹಿಕೆಯ ಅರ್ಥವು ಇತಿಹಾಸ ಸಂದರ್ಭದಲ್ಲಿ ಅದು ಬಳಕೆಯಾಗುವ ಅರ್ಥಕ್ಕಿಂತ ಭಿನ್ನವಾದುದು. ಸಾಮಾನ್ಯವಾಗಿ ಮನುಷ್ಯನ ವ್ಯವಹಾರಗಳಲ್ಲಿ ಪ್ರಿಯವಾದದ್ದು ಎಂದರೆ ಒಳ್ಳೆಯ ಮಾತು, ವಿನಯದ ನಡವಳಿಕೆ, ಔದಾರ್ಯ, ದಯಾಪರತೆ, ಕಲಾಪ್ರೇಮ ಇವು ಸಾಮಾನ್ಯವಾಗಿ ಸಂಸ್ಕೃತಿ ಎನ್ನಿಸಿಕೊಳ್ಳುತ್ತವೆ. ಆದರೆ ಮನುಷ್ಯನ ಇತಿಹಾಸದಲ್ಲಿ ಮನುಷ್ಯ ಹುಟ್ಟಿನಿಂದ ಸ್ವಾಭಾವಿಕವಾಗಿ ದತ್ತವಾದುವನ್ನು ಬಿಟ್ಟು ಉಳಿದಂತೆ ತನ್ನ ಅಸ್ತಿತ್ವಕ್ಕೆ ಅವನೇ ಸ್ವತಃ ರೂಪಿಸಿಕೊಂಡ ಎಲ್ಲವನ್ನೂ ಸಂಸ್ಕೃತಿ ಪದ ಒಳಗೊಳ್ಳುತ್ತದೆ. ಮನೆ ಕಟ್ಟುವುದು, ವ್ಯವಸಾಯ, ಭಾಷೆ, ಆಹಾರ, ಆಡಳಿತ ವಿಧಾನ, ಆರ್ಥಿಕವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಮತಧರ್ಮ, ಇತ್ಯಾದಿಗಳನ್ನು ಒಳಗೊಳ್ಳುವ ಅವನ ಬದುಕಿನ ಸಮಸ್ತವನ್ನೂ ಆ ಸವಿ ಒಳಗೊಳ್ಳುತ್ತದೆ. ಕೂಗುವುದನ್ನು ಅಥವಾ ಧ್ವನಿ ಹೊರಡಿಸುವುದನ್ನು ಮನುಷ್ಯನಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಆದರೆ ಧ್ವನಿಗಳನ್ನು ಕೂಡಿಸಿ ಅವನು ಮಾಡಿ ಕೊಂಡಿರುವ, ಭಾಷೆಯು ಸಂಸ್ಕೃತಿಯ ಒಂದು ನಿದರ್ಶನ. ಹಸಿವಾದಾಗ ಸಿಕ್ಕಿದ್ದನ್ನು ತಿನ್ನುವುದು, ಆ ಆಹಾರದಲ್ಲಿ ಯಾವುದು ಸ್ವೀಕಾರಾರ್ಹ ಅಥವಾ ತ್ಯಾಜ್ಯ ಎಂಬಂತಹ ವಿ ನಿಷೇಧಗಳು ಸಂಸ್ಕೃತಿ. ಮೇಲ್ಕಂಡ ಎರಡು ಅರ್ಥಗಳಲ್ಲಿ ಮುಖ್ಯವಾಗಿ ಎರಡನೆಯದನ್ನಿಟ್ಟುಕೊಂಡು ಶಾಸನಗಳಲ್ಲಿ ಸಾಂಸ್ಕೃತಿಕ ಅಕಂಶಗಳು ಎಂಬುದನ್ನು ಕುರಿತು ವಿವೇಚನೆ ನಡೆಸಲಾಗುತ್ತದೆ.
ಕರ್ನಾಟಕದ ಚರಿತ್ರೆಯ ಆರಂಭದ ಬಗ್ಗೆ ನಾವು ಅವಲಂಬಿಸಲೇ ಬೇಕಾಗಿರುವ ದಾಖಲೆಗಳೆಂದರೆ ಕಲ್ಲಿನ ಮೇಲೆ ಕೆತ್ತಲಾಗಿರುವ ಶಿಲಾಶಾಸನಗಳು, ಕ್ರಿ.ಶ. ೩೫೦ ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದ ಮಯೂರ ಶರ್ಮ ಎಂಬ ಬ್ರಾಹ್ಮಣ ಯುವಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ಕಂಚಿಗೆ ಹೋದಾಗ ಅಲ್ಲಿನ ಪಲ್ಲವ ರಾಜಕುಮಾರರು ತಾವು ಕ್ಷತ್ರಿಯರೆಂದು ಬೀಗುತ್ತ ಬಡ ಬ್ರಾಹ್ಮಣನೆಂಬ ಕಾರಣಕ್ಕೆ ಅವನನ್ನು ಅವಮಾನಪಡಿಸಿದ್ದರಿಂದ ಕ್ರೋಧ ತಪ್ತನಾದ ಮಯೂರಶರ್ಮನು ಬ್ರಾಹ್ಮಣ್ಯ ಸೂಚಕ ಚಿಹ್ನೆಗಳನ್ನು ತ್ಯಜಿಸಿ ಶಸ್ತ್ರಗಳನ್ನು ಹಿಡಿದು ಸೈನ್ಯವನ್ನು ಕಟ್ಟಿ ಪಲ್ಲವರನ್ನು ಸೋಲಿಸಿ ಅವರಿಂದ ಪಟ್ಟಾಬಿಶಕ್ತನಾಗುತ್ತಾನೆ, ಅವನಿಂದ ಕದಂಬರಾಜ್ಯ ಆರಂಭವಾಯಿತು.  ಈ ವಿಷಯವು ಕ್ರಿ.ಶ.೪೫೦ರ ಕಾಕುತ್ಸವರ್ಮನ ತಾಳಗುಂದದ ಪ್ರಣವೇಶ್ವರ ದೇವಾಲಯದ ಮುಂದಿನ ಸ್ತಂಭ ಶಾಸನದಿಂದ ತಿಳಿದು ಬರುತ್ತದೆ.
ಮಯೂರಶರ್ಮನ ಗುರು ವೀರಶರ್ಮನೆಂದು ತಾಳಗುಂದ ಶಾಸನ ಹೇಳಿದುದನ್ನು ಆ ಗುರುವು ಮಯೂರಶರ್ಮನ ಅಜ್ಜನೆಂದು ಗುಡ್ನಾಪುರ ಶಾಸನ ತಿಳಿಸುತ್ತದೆ. ಮಯೂರಶರ್ಮನು ಪಲ್ಲವರನ್ನು ಸೋಲಿಸಲು ಸೇನೆಯನ್ನು ಕಟ್ಟಿ ಬಲಿಷ್ಠವಾಗಲು ಚಿತ್ರದುರ್ಗದ ಪಕ್ಕದ ಚಂದ್ರವಳ್ಳಿಯನ್ನು ಆರಿಸಿಕೊಂಡನೆಂಬ ವಿಷಯವು ಚಂದ್ರವಳ್ಳಿಯಲ್ಲಿ ದೊರಕಿರುವ ಅವನೇ ಹಾಕಿಸಿರುವ ಶಾಸನದಿಂದ ತಿಳಿದುಬರುತ್ತದೆ.
ಕನ್ನಡದ ಮೊತ್ತಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಕಾಲದ್ದೇ ಆಗಿರುವುದು ಆಕಸ್ಮಿಕವಲ್ಲ .ಕ್ರಿ. ಶ. ೩೫೦ ರವರೆಗೆ  ಕರ್ನಾಟಕವನ್ನು ಆಳುತ್ತಿದ್ದ ದೊರೆಗಳು ಮೌರ್ಯ, ಶಾತವಾಹನರು, ಪಲ್ಲವರೇ ಮೊದಲಾದ ಕನ್ನಡೇತರ ರಾಜವಂಶಗಳಿಗೆ ಸೇರಿದವರು. ಆಗ ಕನ್ನಡವು ಜನರ ಆಡುಭಾಷೆಯಾಗಿದ್ದರೂ ದೊರೆಗಳು ಕನ್ನಡೇತರರಾಗಿದ್ದರಿಂದ ಕನ್ನಡಕ್ಕೆ ರಾಜರ, ರಾಜಾಸ್ಥಾನದ, ಅಥವಾ ರಾಜಕೀಯದ ಬೆಂಬಲವಾದರೂ ಹೇಗೆದೊರಕೀತು. ಕನ್ನಡವನ್ನು ಮಾತೃಭಾಷೆಯಾಗುಳ್ಳ ಕದಂಬರು ಒಂದು   ಸ್ವತಂತ್ರ  ರಾಜ್ಯವನ್ನು    ಸ್ಥಾಪನೆ ಮಾಡಿದ್ದರಿಂದ ಸಹಜವಾಗಿ ಆ ಭಾಷೆ ರಾಜರ, ಆಡಳಿತದ  ಭಾಷೆಯಾಗಿ ಪರಿಣಮಿಸಿತು. ಭಾಷೆಗೆ ದೊರಕಿದ ಆ ಮಹತ್ವದ ಸ್ಥಾನವು ಕನ್ನಡ ಜನತೆಯ ಹೆಚ್ಚಿನ ಆತ್ಮವಿಶ್ವಾಸದ ಕುರುಹೂ ಆಗಿದೆ.
ಯಾವ ನಾಡು ತನ್ನ ಭಾಷೆಯಲ್ಲಿ ಆಡಳಿತವನ್ನು ನಡೆಸುತ್ತದೆ, ಶಿಕ್ಷಣವನ್ನು ನೀಡುತ್ತದೆ ಆ ನಾಡು ಆರ್ಥಿಕವಾಗಿ ಬೆಳೆಯುತ್ತದೆ, ಸಾಂಸ್ಕೃತಿಕವಾಗಿ ತನ್ನ ವೈಶಿಷ್ಠ್ಯದೊಡನೆ ವಿಕಾಸವಾಗುತ್ತದೆ. ಕ್ರಿ. ಶ. ೪೫೦ ರ ಹಲ್ಮಿಡಿ ಶಾಸನವು ಕನ್ನಡ ಭಾಷೆಯ ಊರ್ಧ್ವಮುಖಿ ಪ್ರಗತಿಯ ಲಕ್ಷಣವಾಗಿರುವುದಲ್ಲದೆ ಕನ್ನಡಿಗರಲ್ಲಿ ಮಾಡಿದ್ದ ಒಂದು ಆತ್ಮೀಯಸಂಕೇತವೂ ಆಗಿದೆ. ಚಿಕ್ಕ ಆದರೆ ಪ್ರಭಾವಶಾಲಿ ಮನೆತನವಾಗಿದ್ದ ಕದಂಬರು ದೂರದ ಉತ್ತರ ಭಾರತದ ಗುಪ್ತ ಚಕ್ರವರ್ತಿಗಳ ಜೊತೆ ರಕ್ತ ಸಂಭಂಧವನ್ನು ಬೆಳೆಸುವಷ್ಟು ಪ್ರಖ್ಯಾತರೂ ಪ್ರಬಲರೂ ಆದರು. ಅವರ ರಾಜ್ಯವು ಸಹಜವಾಗಿಯೇ ಮುಂದೆ ಆರನೆಯ ಶತಮಾನದಲ್ಲಿ ಬಾದಾಮಿ ಚಾಲುಕ್ಯರು ಒಂದು ಚಕ್ರಾಪತ್ಯವನ್ನೇ ಕಟ್ಟಿ ಮೆರೆಯಲು ದೊಡ್ಡ ಪ್ರಚೋದನೆ ನೀಡಿದುದಲ್ಲದೆ ಬೀಜಾಂಕುರವನ್ನೂ ಹಾಕಿತು. ಕ್ರಿ. ಶ. ೬೩೪ ರ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದ ಪ್ರಕಾರ, ಚಾಲುಕ್ಯರ ಮೇಲೆ ದಂಡೆತ್ತಿ ಬಂದ ಉತ್ತರ ಪಥೇಶ್ವರನೆಂದು ಹೆಮ್ಮೆ ಪಡುತ್ತಿದ್ದ ಹರ್ಷವರ್ಧನನನ್ನು ನರ್ಮದೆಯ ತೀರದಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಪುಲಕೇಶಿಯು ಗೆಲುವನ್ನು ಸಂಪಾದಿಸಿದನು. ಐಹೊಳೆ ಶಾಸನದ ವಿಷಯಕ್ಕೆ ಪೋಷಕವಾಗಿ ಹ್ಯುಯೆನ್‌ತ್ಸಾಂಗನೆಂಬ ಚೀನೀ ಪ್ರವಾಸಿಗನ ಬರಹಗಳು ಸಾಕ್ಷ್ಯಾಧಾರ ಒದಗಿಸುತ್ತವೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಐಹೊಳೆ,ಪಟ್ಟದಕಲ್ಲು ದೇವಾಲಯಗಳು,
ಬಾದಾಮಿಯ ಗುಹಾಂತರ ದೇವಾಲಯಗಳು ನಿರ್ಮಾಣಗೊಂಡವು. ಅವರ ಕಾಲದಲ್ಲೇ ಕನ್ನಡದಲ್ಲಿ ಸಾಹಿತ್ಯ ರಚನೆಗೆ ಅಂಕುರಾರ್ಪಣವಾಯಿತೆಂದು ಹೇಳಲು ಆಧಾರಗಳಿವೆ.  ಅವರ ಕಾಲದಿಂದ ಸಾಹಿತ್ಯಕ ಚಟುವಟಿಕೆಗಳು ಆರಂಭವಾಗಿ, ಸುಂದರ ಕನ್ನಡ ಬಿಡಿಪದ್ಯಗಳು ಶಾಸನಗಳಲ್ಲಿ  ಕ್ರಿ. ಶ. ೭೦೦ ರ ಹೊತ್ತಿಗೆ ಕಾಣಿಸಿಕೊಂಡು ಪಂಪನ ಕಾವ್ಯಗಳ  ಮೂಲಕ  ಕನ್ನಡ ಸಾಹಿತ್ಯವು    ಉತ್ತುಂಗ   ಶಿಖರವನ್ನು ಮುಟ್ಟಿತು. ಕ್ರಿ. ಶ. ೭೦೦ ರ ಬಾದಾಮಿಯ ಕಪ್ಪೆ ಅರಭಟ್ಟನ ಈ ತ್ರಿಪದಿ ಪದ್ಯ ಗಮನಾರ್ಹ.
ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ,  ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್  ಮಾಧವನೀತನ್ ಪೆರನಲ್ಲ||
ಅದೇಕಾಲದ ಶ್ರವಣ ಬೆಳಗೊಳದ ಶಾಸನ ಒಂದರ ಸುಂದರ ಬಿಡಿ ಪದ್ಯ ಹೀಗಿದೆ:
ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ|
ಪಿರಿಗುಂ ಶ್ರೀರೂಪ ಲೀಲಾಧನವಿಭವ ವಾರಾಶಿಗಳ್, ನಿಲ್ಲವಾರ್ಗ|
ಪರಮಾರ್ಥಂ ಮೆಚ್ಚಿನ್ ಆನ್ ಈ ಧರಣಿಯೊಳಿರನೆಂದು ಸನ್ಯಾಸನಂಗೆ|
ಯ್ದುರು ಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್||
ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು. ಅತ್ತಿಮಬ್ಬೆಯ ಆಧ್ಯಾತ್ಮಿಕ ಬದುಕಿನ ಚಿತ್ರಣವು ಲಕ್ಕುಂಡಿ ಶಾಸನದಲ್ಲಿ ದೊರೆತರೆ ಬೇಲೂರು ಶಾಸನದಲ್ಲಿ ಶಾಂತಲೆಯ ಕಲಾನಿಪುಣತೆಯ ಚಿತ್ರಣವು ಲಬ್ಯವಾಗುತ್ತದೆ. ಕೋಲಾರ ಜಿಲ್ಲೆಯ ಸಾಮಿನಿರ್ಮಡಿ ಎಂಬ ಅಪೂರ್ವ ಮಹಿಳೆಯ ವಿದ್ವತ್ತಿನ ಪರಿಚಯ ಅಲ್ಲಿನ ಶಾಸನದಿಂದ ಲಭ್ಯ. ಹನ್ನೊಂದನೇ ಶತಮಾನದಲ್ಲಿ ರಣಭೈರವಿಯಂತೆ ಹೋರಾಡಿ ಶತ್ರುಗಳನ್ನು ಗೆದ್ದ ವಿಷಯವು ಹಲವು ಶಾಸನಗಳಲ್ಲಿ  ವರ್ಣಿತವಾಗಿದೆ.
ಕ್ರಿ. ಶ. ೧೦೯೦ ರಲ್ಲಿದ್ದ ಸಿರಿಯ ಕೇತಲ ದೇವಿಯನ್ನು ಶಾಸನವೊಂದು ದೇಶ ಭಾಷಾ ವಿದ್ಯಾಧರಿ ಎಂದು ವರ್ಣಿಸಿರುವುದು ಅತ್ಯಂತ ಗಮನಾರ್ಹ. ಅವಳ ಕಾಲಕ್ಕೆ ಕನ್ನಡದಲ್ಲಿ ಸಾಹಿತ್ಯ ಕೃತಿಗಳು ಮೊತ್ತವಲ್ಲದೆ ಗೇಯ ಕೃತಿಗಳೂ ರಚಿತವಾಗಿದ್ದುವೆಂಬ ಸಂಗತಿ ಅದರಿಂದ ಸೂಚಿತವಾಗುತ್ತದೆ.
ಶಾಸನಗಳಲ್ಲಿ ಕರ್ನಾಟಕವನ್ನು ಕಾಲದಿಂದ ಕಾಲಕ್ಕೆ ಆಳಿದ ದೊರೆಗಳು, ಅವರ ಸಾಹಸಿ ಔದಾರ್ಯಗಳು ವಿಸ್ತಾರವಾಗಿ ವರ್ಣಿತವಾಗಿವೆ. ಸ್ವಾರ್ಥಿಗಳಾಗಿದ್ದ ಕ್ರೂರಸ್ವಭಾವದ ದೊರೆಗಳಿದ್ದರು ನಿಜ ಆದರೆ ಅವರ ಸಂಖ್ಯೆ ಕಡಿಮೆ. ಜನತೆಯ ಯೊಗಕ್ಷೇಮಕ್ಕಾಗಿ ಸದಾ ಚಿಂತಿಸುತ್ತಿದ್ದ ಹಲವು ದೊರೆಗಳ ವಿಷಯ ಶಾಸನಗಳಲ್ಲಿ ಬಂದಿವೆ. ಐದನೆಯ ಶತಮಾನದ ರಾಜನೊಬ್ಬನು ಸರ್ವಜೀವ ಬಂಧು ವೆನಿಸಿಕೊಂಡಿದ್ದನು. ಗಂಗರ ದೊರೆಗಳನ್ನು ಸಮ್ಯಕ್ ಪ್ರಜಾಪರಿಪಾಲನೈಕ ರಾಜ್ಯ ಪ್ರಯೋಜನರ್ ಎಂದು ಅವರ ಶಾಸನಗಳು ಕೊಂಡಾಡಿವೆ. ರಾಜ್ಯ, ನಗರ, ಗ್ರಾಮಗಳ ಆಡಳಿತ ವಿಧಾನ, ತೆರಿಗೆ ಸಂಗ್ರಹಣ ರೀತಿ ಇವುಗಳ ಚಿತ್ರವು ಶಾಸನಗಳಿಂದ ತಿಳಿದು ಬರುತ್ತದೆ. ವೀರರ ಶೌರ್ಯ ಸಾಹಸಗಳನ್ನು, ಅವರ ರಾಜನಿಷ್ಟೆಯನ್ನು ದೇಶಪ್ರೇಮವನ್ನು ಶಾಸನಗಳು ಕೊಂಡಾಡಿವೆ. ಆತಕೂರು ಶಾಸನದಲ್ಲಿರುವಂತೆ ಚೋಳರಿಗೂ ರಾಷ್ಟ್ರಕೂಟರಿಗೂ   ನಡೆದ   ಘೋರ ಯುದ್ಧದಲ್ಲಿ ರಾಷ್ಟ್ರಕೂಟರಿಗೆ ಬೆಂಬಲವಾಗಿ ನಿಂತ ಬೂತುಗ ದೊರೆಯ ನೈತಿಕ  ಮನಾಲರನು ಅಪೂರ್ವ ಸಾಹಸವನ್ನು ಮೆರೆಯುತ್ತಾನೆ. ಅದಕ್ಕೆ ಬಹುಮಾನ ಸೂಚಕವಾಗಿ ಏನು ಬೇಕಾದರೂ ಕೇಳು ಎಂದು ಬೂತುಗದೊರೆಯು ಸೂಚಿಸಿದಾಗ ಅವನ ಮನಾಲರನು ದೊರೆಯ ಬಳಿ ಇದ್ದ ಕಾಳಿ  ಎಂಬ ನಾಯಿಯನ್ನು ಮಾತ್ರ ಕೇಳಿ ಪಡೆದು ಅದನ್ನು ಬೇಟೆಗೆ ಕರೆದೊಯ್ದಾಗ ಅದು ಹಂದಿಯೊಂದನ್ನು ಕೊಂದು ತಾನೂ ಸಾಯುತ್ತದೆ. ತನ್ನ ಪ್ರೀತಿಯ ನಾಯಿಯ ಸ್ಮಾರಕವಾಗಿ ಕೆತ್ತಿಸಿರುವ ಶಾಸನದ ಮೇಲೆ ನಾಯಿ ಹಂದಿಗಳ ಕಾದಾಟದ ಚಿತ್ರವಿದೆ. ಈ ಅಪೂರ್ವ ಶಾಸನವು ಚೋಳರ ರಾಷ್ಟ್ರಕೂಟರ ಯುದ್ಧವನ್ನು ಹಿನ್ನೆಲೆಗೆ ಸರಿಸಿ ಮನುಷ್ಯ ಮತ್ತು ಪ್ರಾಣಿಗಳಿಗಿರುವ ಭಾವನಾತ್ಮಕ ಸಂಬಂಧವನ್ನು ಮುಂದುಮಾಡುತ್ತದೆ. ಗಂಗರ ದೊರೆ ಪೆರ್ಮಾನಡಿ ಸತ್ತಾಗ ಅವನ ಸೇವಕ ಅಗರಯ್ಯ ಅವನ ಜೊತೆ ತಾನೂ ಮಡಿದು ತನ್ನ ಸ್ವಾಮಿಭಕ್ತಿಯನ್ನು ಪ್ರಕಟಿಸುವ ವಿಷಯ ದೊಡ್ಡ ಹುಂಡಿ ಶಾಸನದಲ್ಲಿದೆ.
ಇದೇ ರೀತಿ ಗಂಡಂದಿರು ಮಡಿದಾಗ ಅವರ ಪತ್ನಿಯರು ಸಹಗಮನ ಮಾಡಿದ ನೂರಾರು ಶಾಸನಗಳಿವೆ ಕೆಲವು ಶಾಸನಗಳ ಮೇಲೆ ಸತಿಯರಾದ ಸ್ತ್ರೀಯರ ಶಿಲ್ಪಗಳಿರುತ್ತವೆ. ಗುಂಡ್ಲುಪೇಟೆ ತಾಲ್ಲೂಕಿನ ಬೆಳತೂರಿನ ಹನ್ನೊಂದನೆಯ ಶತಮಾನದ ದೇಕಬ್ಬೆ ಶಾಸನದಲ್ಲಿ, ಅವಳು ತನ್ನ ಗಂಡನ ಜೊತೆ ಚಿತೆಯೇರಲು ನಿರ್ಧರಿಸಿದಾಗ ಅವಳ ತಂದೆ ತಾಯಂದಿರು ಮತ್ತು ಸಮಾಜ ಎಷ್ಟು ಕೇಳಿಕೊಂಡರೂ ತನ್ನ ದೃಡನಿರ್ಧಾರವನ್ನು ಬಿಡದೆ ಅಗ್ನಿಪ್ರವೇಶ ಮಾಡಿದ ದುರಂತ ಚಿತ್ರವನ್ನು ನಮ್ಮ ಮುಂದೆ ಇಡಲಾಗಿದೆ. ಚನ್ನಗಿರಿ ತಾಲ್ಲೂಕಿನ ಬೊಮ್ಮೇನಹಳ್ಳಿಯಲ್ಲಿ ಹಿಂದೆ ಇಳಿಬಿಟ್ಟಿರುವ ಜಡೆಯ ಸುಂದರ ಮಾಸ್ತಿಕಲ್ಲುಗಳಿವೆ.
ಕಳ್ಳರು ಊರಿಗೆ ನುಗ್ಗಿ ದನಗಳನ್ನು ಅಪಹರಿಸಿದಾಗ ಕಳ್ಳರನ್ನು ಧೈರ್ಯದಿಂದ ಎದುರಿಸಿ ಆ ದನಗಳನ್ನು ಹಿಂದಿರುಗಿಸಿ ತಾವೂ ಮಡಿದ ಹಲವು ವೀರರ ಶಾಸನಗಳು ದೊರೆಯುತ್ತವೆ. ಆ ವೀರರ ಹೆಣಗಳನ್ನು ತುಳಿಯುತ್ತ ದನಗಳು ಹಿಂದಿರುಗುತ್ತಿರುವುದನ್ನು ಶಿಲ್ಪರೂಪದಲ್ಲಿ ಹಲವೆಡೆ ಕೆತ್ತಲಾಗಿದೆ.
ಹಿಂದಿನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ವಿಸ್ತಾರವಾದ ಪರಿಚಯ ಶಾಸನಗಳಿಂದ ದೊರಕುತ್ತದೆ. ಅಗ್ರಹಾರ, ಮಠ, ದೇವಾಲಯಗಳಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸಕ್ಕೆ ಶ್ರೀಮಂತರು ಉದಾರವಾಗಿ ದತ್ತಿಗಳನ್ನು ನೀಡಿರುವುದು ಶಾಸನೋಕ್ತವಾಗಿದೆ. ಗುಲ್ಬರ್ಗ ಜಿಲ್ಲೆಯ ನಾಗಾವಿ ಎಂಬಲ್ಲಿದ್ದ  ಉನ್ನತ ವಿದ್ಯಾಕೇಂದ್ರಕ್ಕೆ ಹಾಗೆ ದತ್ತಿಗಳನ್ನು ನೀಡಿರುವುದನ್ನು ಅಲ್ಲಿನ ಶಾಸನದಲ್ಲಿ ಬಂದಿವೆ. ಶಿವಮೊಗ್ಗ  ಜಿಲ್ಲೆಯ ಬಳ್ಳಿಗಾವೆಯಲ್ಲಿ ಕೆರೆಯ ಕೋಡಿಯ ಬಳಿ  ಇದ್ದ ಕೇದಾರೇಶ್ವರ ದೇವಾಲಯ ಅಥವಾ ಕೋಡಿಮಠವು ಒಂದು ಉನ್ನತ ಶಿಕ್ಷಣ ಕೇಂದ್ರವಾಗಿದ್ದು ಅಲ್ಲಿ ಶಿಕ್ಷಣ ಪಡೆಯಲು ಭಾರತದ ನಾನಾ ಭಾಗಗಳಿಂದ ಶಿಕ್ಷಣಾರ್ಥಿಗಳು ಬರುತ್ತಿದ್ದರು.
ಆ ಮಠವು ಶಿಕ್ಷಣಕೇಂದ್ರವಾಗಿದ್ದುದಲ್ಲದೆ, ಕಲಾವಿದರಿಗೆ ಅನಾಥರಿಗೆ ಆಶ್ರಯ ಸ್ಥಾನವೂ ಆಗಿದ್ದಿತು. ರೋಗಿಗಳಿಗೆ ಆಸ್ಪತ್ರೆಯೂ ಆಗಿದ್ದಿತು. ಅಲ್ಲಿ ಹೊರ ರೋಗಿಗಳಿಗೆ ಮಾತ್ರವಲ್ಲ ಅಲ್ಲೇ ಆಶ್ರಯ ನೀಡಿದ್ದ ಒಳ ರೋಗಿಗಳಿಗೂ ವೈದ್ಯೋಪಚಾರವನ್ನು ನೀಡುತ್ತಿದ್ದಿತೆಂದು ಅಲ್ಲಿನ ಶಾಸನಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಆ ಮಠವನ್ನು ಹನ್ನೆರಡನೆಯ ಶತಮಾನದ ಕರ್ನಾಟಕ ವಿಶ್ವವಿದ್ಯಾಲಯವೆಂದು ಆಧುನಿಕ ವಿದ್ವಾಂಸರು ಬಣ್ಣಿಸಿರುವುದು ಗಮನಾರ್ಹ.

ಹಲವು ಶಾಸನಗಳನ್ನು  ರನ್ನನಂತಹ ಶ್ರೇಷ್ಟ ಕವಿಗಳು ಬರೆದಿದ್ದರಲ್ಲದೆ, ಅವುಗಳನ್ನು  ರಚಿಸಿದ ಹಲವರು ಶ್ರೇಷ್ಠ ಕವಿಗಳಾಗಿದ್ದು, ಅವರು ಕೇವಲ ಶಾಸನ ಪಾಠಗಳಲ್ಲಿ ಮಾತ್ರ ಉಳಿದಿದ್ದಾರೆ. ಉದಾಹರಣೆಗೆ, ಪಂಪನ ತಮ್ಮ ಜಿನವಲ್ಲಭ ರಚಿಸಿದ ಶಾಸವು ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಸಾಲದಲ್ಲಿದ್ದು, ಅವನು ತನ್ನ ಅಣ್ಣನ ಹೆಸರಿನಲ್ಲಿ ನಿರ್ಮಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಅಲ್ಲಿದೆ. ಪಂಪನ ಕಿರಿಯ ಸಮಕಾಲೀನ ರನ್ನನ ಸ್ವಹಸ್ತಾಕ್ಷರಗಳು ಶ್ರವಣಬೆಳಗೊಳದ ಚಿಕ್ಕ ಬೆಟ್ಟದ ಮೇಲೆ ಇಂದಿಗೂ ಉಳಿದು ಬಂದಿವೆ. ಚಾಮರಸ ಕವಿ (೧೪೩೦) ವಾಸವಾಗಿದ್ದ ಪ್ರದೇಶವನ್ನು ಹಂಪಿಯಲ್ಲಿ ದೊರಕಿರುವ ಒಂದು ಶಾಸನದಿಂದ ಗುರುತಿಸಬಹುದು. ಹೊಯ್ಸಳರ ಕಾಲದ ಮಲ್ಲಿತಮ್ಮರಂತಹ ಶಿಲ್ಪಿಗಳ ಹೆಸರುಗಳು ಅವರು ಕೆತ್ತಿದ ವಿಗ್ರಹಗಳ ಪಾದ ಪೀಠಗಳ ಮೇಲೆ ದೊರೆಯುತ್ತವೆ.
ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ. ಕೆರೆ ಕಾಲುವೆ ದೇವಾಲಯಗಳನ್ನು ಕಟ್ಟಿಸಿದ್ದಕ್ಕೋ  ವೀರರ ಸ್ಮಾರಕಗಳನ್ನು ನಿರ್ಮಿಸಿ ಅವರ ಮನೆಯವರೆಗೆ ಕೊಟ್ಟ ದತ್ತಿಗಳ ವಿಷಯವನ್ನು ದಾಖಲಿಸುವುದಕ್ಕೋ  ಇಂತಹ ಹಿನ್ನೆಲೆಯಲ್ಲಿ ಆ ಕಾರ್ಯಗಳು ಶಾಶ್ವತವಾಗಿರಲೆಂದು ಕಲ್ಲಮೇಲೆ ಕೆತ್ತಿಸಿರುವ ಕರ್ನಾಟಕ ಸಂಸ್ಕೃತಿಯ ಹಲವು ಮುಖಗಳನ್ನು, ಒಳಪದರುಗಳನ್ನು ಪರಿಚಯ ಮಾಡಿಕೊಡುತ್ತವೆ. ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಮಾಹಿತಿ ಇಷ್ಟು ಸಮೃದ್ಧವಾಗಿ ದೊರಕುವುದಿಲ್ಲ ಮಾತ್ರವಲ್ಲ, ಬಹುತೇಕ ಕಡೆ ಅದು ಕೇವಲ ಸೂಚನೆಯ ರೂಪದಲ್ಲಿರುತ್ತದೆ. ಶಾಸನಗಳ ಮೇಲಿನ ಬರಹಗಳಂತೆಯೇ ಅವುಗಳ ಮೇಲಿನ ಶಿಲ್ಪವೂ ಸಾಂಸ್ಕೃತಿಕ ಅಧ್ಯಯನಕ್ಕೆ ಪೋಷಕ. ಕರ್ನಾಟಕ ಸಂಸ್ಕೃತಿಯ ಅಧ್ಯಯನದ ಪುನಾರಚನೆಯಲ್ಲಿ ಶಾಸನಗಳಿಗೆ ಅಗ್ರಸ್ಥಾನಮೀಸಲೆಂಬಲ್ಲಿ ವಿವಾದಕ್ಕೆ ಅವಕಾಶವಿಲ್ಲ.

ಚಿತ್ರಗಳು:
೧. ಕರ್ನಾಟಕದ ಪರಂಪರೆ  ಸಂಪುಟ ೧, ಮೈಸೂರು ಸರ್ಕಾರ.
೨. ಶಾಸನ ಸಂಗ್ರಹ  ಎಂ. ಎಂ. ಅಣ್ಣಿಗೇರಿ ಮತ್ತು ಡಾ|| ಆರ್.ಶೇಷಶಾಸ್ತ್ರಿ.
೩. ಕರ್ನಾಟಕದ ವೀರಗಲ್ಲುಗಳು  ಡಾ|| ಆರ್.ಶೇಷಶಾಸ್ತ್ರಿ.
೪. ಕರ್ನಾಟಕದ ಯಾತ್ರೆ  ಜೀರಗೆಕಟ್ಟೆ ಬಸವಪ್ಪ.
೫. ಹೊಸತು ಹೊಸತು  ಡಾ|| ಎಂ. ಚಿದಾನಂದಮೂರ್ತಿ.

  • ಲೇಖಕರು: ಡಾ|| ಎಂ.ಚಿದಾನಂದ ಮೂರ್ತಿ