Oct 7, 2014

ನಿಮಗೆ ಗೊತ್ತಿಲ್ಲದ ರಾಮಾಯಣದ 10 ರಹಸ್ಯಗಳು


ರಾವಣನ ಸಾವಿಗೆ ಪಾರ್ವತಿ ಕಾರಣ!
ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.

ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು?
ಭಾರತ-ಶ್ರೀಲಂಕಾ ನಡುವೆ ಇರುವ ರಾಮಸೇತು ಒಡೆಯಲು ಎರಡು ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ! ಸೇತುವೆಯನ್ನು ಕಟ್ಟಿದ್ದು ಕಪಿಸೈನ್ಯ ಎಂಬುದು ಕೂಡ ಪೂರ್ತಿ ನಿಜವಲ್ಲ. ಅದನ್ನು ನಿರ್ಮಿಸಿದ್ದು ರಾಮನ ಅಂತಃಶಕ್ತಿ. ಇಲ್ಲವಾದರೆ, ಯಾರಾದರೂ ಮಂಗಗಳನ್ನಿಟ್ಟುಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಲು ಸಾಧ್ಯವೇ? ವಾಲ್ಮೀಕಿಗೆ ರಾಮನನ್ನು ಪವಾಡಪುರುಷನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿ (ಪುರುಷೋತ್ತಮ) ಜನರಿಗೆ ಆದರ್ಶವಾಗಿ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಹಾಗಾಗಿ ಕಪಿಗಳ ನೆರವಿನಿಂದ ರಾಮ ಸೇತುವೆ ಕಟ್ಟಿದ ಎಂಬಂತೆ ಬಿಂಬಿಸಿದರು.
 
ವನವಾಸಕ್ಕೆ ಹೋದಾಗ ರಾಮನಿಗೆ 27 ವರ್ಷ
ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ. ಆದರೆ ಅವನು ಖಾಲಿ ಕೈಲಿ ಹೋಗಬೇಕೆಂದು ಕೈಕೇಯಿ ತಾಕೀತು ಮಾಡಿದಳು. ಅದಕ್ಕೂ ಮುನ್ನವೇ, ಅರಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ರಾಮ ನಿರ್ಧರಿಸಿದ್ದ. ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುವಸ್ತ್ರ ಉಟ್ಟುಕೊಳ್ಳಲೂ ಅವನು ಸೂಚಿಸಿದ್ದ.

ರಾಮ ಶಿವಧನುಸ್ಸನ್ನು ಮುರಿಯಲಿಲ್ಲ!
ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕತೆ ಚಾಲ್ತಿಯಲ್ಲಿದೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ. ಶಿವನ ಧನುಸ್ಸನ್ನು ಹೆದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ. ಇದೊಂದು ರೋಚಕ ಕತೆಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.


ರಾಮಾಯಣದ ಪ್ರಕಾರ ದೇವರು ಕೇವಲ 33
ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (ಮೂರು ಕೋಟಿ) ದೇವರು, ಮೂವತ್ತಮೂರು ಕೋಟಿ ದೇವರು ಎಂದೆಲ್ಲ ಹೇಳಲಾಗುತ್ತದೆ. ಸರಿಯಾಗಿ ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ. ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಮಾತ್ರ. ರಾಮಾಯಣದ ಅರಣ್ಯಕಾಂಡದಲ್ಲಿ ಇದರ ಉಲ್ಲೇಖವಿದೆ.

ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ
ಮದುವೆಯಾಗಿ ಬಹಳ ವರ್ಷಗಳವರೆಗೂ ದಶರಥ ರಾಜನಿಗೆ ಮಕ್ಕಳಿರಲಿಲ್ಲ. ಮೂವರು ಹೆಂಡಿರಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಿರಲಿಲ್ಲ. ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು. 'ನನ್ನ ನಂತರ ಅಯೋಧ್ಯೆಯ ಕತೆಯೇನು?' ಆಗ ಪುತ್ರಕಾಮೇಷ್ಠಿ ಯಾಗ ಮಾಡಿದ. ರಾಮ ಹುಟ್ಟಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರು ಹುಟ್ಟಿದರು.


ಲಂಕೆ ನಿಜವಾಗಿ ರಾವಣನದ್ದಲ್ಲ
ಲಂಕೆಗೆ ರಾವಣನ ಲಂಕೆ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಬೇರನದು. ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ನಂ.1 ಶ್ರೀಮಂತ ಕುಬೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣ. ಅವನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತು. ಕುಬೇರ ಅಷ್ಟೇನೂ ಪರಾಕ್ರಮಿಯಲ್ಲ. ಆದರೆ ರಾವಣ ಭಯಂಕರ ಶಕ್ತಿವಂತ. ಅಣ್ಣನನ್ನೇ ಸೋಲಿಸಿ ಲಂಕೆಯನ್ನು ಗೆದ್ದು ತಾನು ಆಳತೊಡಗಿದ.


ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ!
ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.

ಅಪ್ಪನ ಮೇಲೇ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ
ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದೂ ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ, ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ. ಆಲಕ್ಷ್ಮಣನಿಗೆ ಸಮಾಧಾನ ಮಾಡಿದ.


ಸೀತೆಗಾಗಿ ಇಂದ್ರ ಪಾಯಸ ತಂದಿದ್ದ!
ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲೇ ಇಂದ್ರ ಅಲ್ಲಿಗೆ ಹೋಗಿದ್ದ. ಸೀತೆಯ ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ಗೊತ್ತಾಯಿತು. ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು, ತನ್ನ ಮಂತ್ರಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)