Oct 21, 2014

ಅಜ್ಞಾನದ ಕತ್ತಲೆಯನ್ನು ನೀಗಿಸುವ ಜ್ಞಾನ ಜ್ಯೋತಿ ದೀಪಾವಳಿ

ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು. ಯಾವುದೇ ಜಾತಿ, ವರ್ಗ, ಅಥವಾ ಪ್ರಾದೇಶಿಕತೆಯ ಭೇದವಿಲ್ಲದೇ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅರ್ಥೈಸಿಕೊ೦ಡಿರುವ ವಿಚಾರವೇನೆ೦ದರೆ, ಬೆಳಕಿನ ಹಬ್ಬವಾದ ದೀಪಾವಳಿಯು ಯಾವುದೋ ಒ೦ದು ನಿರ್ದಿಷ್ಟವಾದ ಧರ್ಮಕ್ಕೆ ಸೇರಿದುದಲ್ಲ, ಅದಕ್ಕೆ ಬದಲಾಗಿ ಇದು ಇಡೀ ವಿಶ್ವದ ಸ೦ಭ್ರಮಾಚರಣೆಯ ಪರ್ವವಾಗಿದೆ. ನಮ್ಮ ಜೀವ, ಜೀವನ, ಹಾಗೂ ಆತ್ಮದಲ್ಲಿರುವ ಅ೦ಧಕಾರವು ತೊಲಗಲಿ ಹಾಗೂ ನಮ್ಮ ಬಾಳ್ವೆಯಲ್ಲಿ ಸದಾ ಜ್ಞಾನಜ್ಯೋತಿಯು ಪ್ರಕಾಶಿಸುತ್ತಿರಲಿ. ನಾವು ಕೇವಲ ಬಹಿರ೦ಗದ ಅಥವಾ ಹೊರಗಣ, ಹೊರಪ್ರಪ೦ಚದ ಬೆಳಕಿಗನ ಕುರಿತಷ್ಟೇ ಚಿ೦ತಿಸುತ್ತೇವೆ. ಆದರೆ, ನಾವು ಅರ್ಥಮಾಡಿಕೊಳ್ಳಬೇಕಾಗಿರುವ ಸ೦ಗತಿಯೇನೆ೦ದರೆ, ಪ್ರತಿಯೋರ್ವ ವ್ಯಕ್ತಿಯ ಒಳಗಣ ಆತ್ಮವು ಬೆಳಕಿನಿ೦ದ ಪ್ರಕಾಶಮಾನವಾಗಬೇಕು ಹಾಗೂ ಇ೦ತಹ ಸ್ಥಿತಿಯನ್ನು ಹೊ೦ದುವುದೇ ಅತ್ಯ೦ತ ಪ್ರಮುಖವಾದುದು ಎ೦ಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. 

ಭಗವಾನ್ ಶ್ರೀ ಕೃಷ್ಣ ಹಾಗೂ ದೀಪಾವಳಿ ದೀಪಾವಳಿಯ ಈ ಪರ್ವದಿನದ೦ದೇ ಭಗವಾನ್ ಶ್ರೀ ಕೃಷ್ಣನು ನರಕಾಸುರನನ್ನು ಸ೦ಹರಿಸಿದನು. ಈ ಶುಭದಿನದ೦ದೇ ಭಗವಾನ್ ಶ್ರೀ ರಾಮಚ೦ದ್ರನು, ರಾವಣನನ್ನು ಪರಾಭವಗೊಳಿಸಿದ ಬಳಿಕ ತನ್ನ ಪತ್ನಿಯಾದ ಮಾತೆ ಸೀತಾದೇವಿಯೊ೦ದಿಗೆ ಅಯೋಧ್ಯೆಗೆ ಮರಳಿ ಬ೦ದನು. ಈ ದಿನದ೦ದೇ ದೇವಿ ಲಕ್ಷ್ಮೀ ಹಾಗೂ ಭಗವಾನ್ ಶ್ರೀ ವಿಷ್ಣುವಿನ ವಿವಾಹ ಮಹೋತ್ಸವವನ್ನಾಚರಿಸಲಾಯಿತು. ಧರ್ಮಾಸಕ್ತರು ಈ ಪರ್ವದಿನದ೦ದು ಕಾಳಿ ದೇವಿಯನ್ನು ಹಾಗೂ ಮಾತೆ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಇದೇ ಸ೦ದರ್ಭದಲ್ಲಿ ಧನತ್ರಯೋದಶಿ ಹಾಗೂ ಸ೦ಪತ್ತಿನ ಪೂಜೆಯನ್ನು ನೆರವೇರಿಸಲಾಗುತ್ತದೆ.

Oct 20, 2014

ಮೈಸೂರು ಸಮೀಪ ಬೌದ್ಧ ಧರ್ಮದ ಕುರುಹು ಪತ್ತೆ !

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹುರ ಗ್ರಾಮದಲ್ಲಿ ಬೌದ್ಧ ಧರ್ಮದ ಪ್ರಾಚೀನ ನೆಲೆಯೊಂದನ್ನು ಮೈಸೂರು ವಿಶ್ವವಿದ್ಯಾ ನಿಲಯದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಜಿ. ಮಂಜುನಾಥ್ ಪತ್ತೆ ಹಚ್ಚಿದ್ದಾರೆ.
ಮೈಸೂರಿನಿಂದ ದಕ್ಷಿಣಕ್ಕೆ ಸುಮಾರು 45 ಕಿ. ಮೀ. ದೂರದಲ್ಲಿರುವ ಹುರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಬೌದ್ಧ ಚೈತ್ಯಾಲಯವೊಂದರ ಗಜಪೃಷ್ಠಾಕಾರದ ಕಟ್ಟಡವೊಂದರ ಆವಶೇಷಗಳು ಹಾಗೂ ಭಗ್ನವಾಗಿರುವ ಬುದ್ಧನ ಮೂರ್ತಿಯು ಕ್ಷೇತ್ರ ಕಾರ್ಯದ ವೇಳೆ ದೊರೆತಿದೆ.

''64 ಸೆಂ.ಮೀ. ಅಗಲ ಮತ್ತು 64 ಸೆಂ.ಮೀ. ಎತ್ತರದ ಕಣಶಿಲೆಯಲ್ಲಿ ನಿರ್ಮಿತವಾದ, ಪದ್ಮಾಸನದಲ್ಲಿ ವ್ಯಾಖ್ಯಾನ ಮುದ್ರೆಯಲ್ಲಿ ಕುಳಿತ ಭಂಗಿಯ ಬುದ್ಧನ ಶಿಲ್ಪದ ತಲೆ ಹಾಗೂ ಬಲಗೈ ಭಿನ್ನವಾಗಿದೆ. ಮೂರ್ತಿಯ ಕಾಲುಗಳವರೆಗಿನ ಪಂಚೆಯ ನೆರಿಗೆಗಳು ಮತ್ತು ಎದೆಯ ಮೇಲಿನ ಉತ್ತರೀಯದ ಗಂಟುಗಳು ಸಹ ಸ್ಪಷ್ಟವಾಗಿ ಕಾಣುವಂತಿವೆ. ವ್ಯಾಖ್ಯಾನ ಮುದ್ರೆಯ ತುಂಡಾದ ಬಲಗೈಯನ್ನು ಅಲ್ಲಿಯೇ ತುಸು ದೂರದಲ್ಲಿರುವ ಅರಳೀ ಮರವೊಂದರ ಕೆಳಗೆ ನಾಗರಕಲ್ಲು ಗಳೊಡನೆ ಪ್ರತಿಷ್ಠಾಪಿಸಲಾಗಿದೆ. ಬುದ್ಧನ ಈ ಶಿಲ್ಪವು ಕ್ರಿ.ಶ. ಸುಮಾರು 6-7ನೇ ಶತಮಾನದ್ದಿರಬಹುದು'' ಎಂದು ಡಾ. ಎಂ.ಜಿ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ರಕ್ಷಣೆಗೆ ಆಗ್ರಹ: ''ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಅಶೋಕನು ಏರ್ಪಡಿಸಿದ್ದ ಬೌದ್ಧ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮೊಗ್ಗಲೀಪುತ್ತತಿಸ್ಸ ಎಂಬ ಬೌದ್ಧ ಬಿಕ್ಕು ಬೌದ್ಧ ಧರ್ಮ ಪ್ರಚಾರಕ್ಕೆ ಮಹಿಷ ಮಂಡಲಕ್ಕೆ ಎಂದರೆ ಇಂದಿನ ಮೈಸೂರು ಪ್ರದೇಶಕ್ಕೆ ಮಹಾದೇವ ಎಂಬ ಬೌದ್ಧ ಬಿಕ್ಕು ಎನ್ನುವವನನ್ನು ಕಳುಹಿಸಿದ ಸಂಗತಿಯು ಶ್ರೀಲಂಕೆಯ ಬೌದ್ಧ ಧರ್ಮ ಗ್ರಂಥಗಳಾದ ದೀಪವಂಸ ಹಾಗೂ ಮಹಾವಂಸಗಳಿಂದ ತಿಳಿದುಬಂದಿದೆ. ಆದರೆ, ಮೈಸೂರಿನ ಪ್ರದೇಶದಲ್ಲಿ ಇದುವರೆಗೂ ಬೌದ್ಧ ಧರ್ಮಕ್ಕೆ ಸೇರಿದ ಯಾವ ಕುರುಹುಗಳೂ ದೊರೆತಿರಲಿಲ್ಲ. ಪ್ರಸ್ತುತ ಹುರ ಗ್ರಾಮದಲ್ಲಿ ದೊರೆತಿರುವ ಬೌದ್ಧ ಧರ್ಮದ ಆವಶೇಷಗಳ ಸಂಶೋಧನೆಯಿಂದ ಈ ಪ್ರದೇಶದಲ್ಲಿ ಕ್ರಿ.ಶ. 6-7ನೇ ಶತಮಾನದವರೆಗೂ ಬೌದ್ಧ ಧರ್ಮ ಅಸ್ತಿತ್ವದಲ್ಲಿತ್ತೆಂದು ಖಚಿತ ವಾಗುತ್ತದೆ. ಈ ಸಂಶೋಧನೆಯ ಬಗ್ಗೆ ವಿಸ್ತೃತವಾದ ಪ್ರಬಂಧವೊಂದನ್ನು ಪ್ರಕಟಿಸ ಲಾಗುವುದು'' ಎಂದು ತಿಳಿಸಿದ್ದಾರೆ.
''ಪ್ರಸ್ತುತ ಈ ಚೈತ್ಯಾಲಯವಿದ್ದ ಸ್ಥಳದಲ್ಲಿ ಪಾಯ ತೋಡಿ ಕಟ್ಟಡವೊಂದನ್ನು ಕಟ್ಟುತ್ತಿರುವುದರಿಂದ, ಚೈತ್ಯಾಲಯದ ಆವಶೇಷಗಳು ನಾಶವಾಗುತ್ತಿವೆ. ಪ್ರಾಚೀನ ಸ್ಮಾರಕ ನಾಶಪಡಿಸುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಅಧಿಕಾರಿಗಳು ಆ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕು. ಈ ಸ್ಥಳದಲ್ಲಿ ವೈಜ್ಞಾನಿಕವಾಗಿ ಉತ್ಖನನವನ್ನು ನಡೆಸಿ, ಆ ಬೌದ್ಧವಶೇಷಗಳನ್ನು ಸಂರಕ್ಷಿಸಬೇಕು'' ಎಂದು ಒತ್ತಾಯಿಸಿದ್ದಾರೆ. ಈ ಕ್ಷೇತ್ರ ಕಾರ್ಯದಲ್ಲಿ ಉಪನ್ಯಾಸಕ ದೊಡ್ಡ ಸ್ವಾಮಿ, ವಿದ್ಯಾರ್ಥಿಗಳಾದ ಕೆ.ವಿ. ಮುರುಳಿ, ಎಂ.ಕೆ. ಮಂಜುನಾಥ್, ಎಂ. ಮುನಿ ಕೆಂಪೇ ಗೌಡ ಸಹಕರಿಸಿದರು ಎಂದು ತಿಳಿಸಿದ್ದಾರೆ.
http://vijaykarnataka.indiatimes.com/articleshow/44879655.cms



Oct 7, 2014

ನಿಮಗೆ ಗೊತ್ತಿಲ್ಲದ ರಾಮಾಯಣದ 10 ರಹಸ್ಯಗಳು


ರಾವಣನ ಸಾವಿಗೆ ಪಾರ್ವತಿ ಕಾರಣ!
ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.

ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು?
ಭಾರತ-ಶ್ರೀಲಂಕಾ ನಡುವೆ ಇರುವ ರಾಮಸೇತು ಒಡೆಯಲು ಎರಡು ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ! ಸೇತುವೆಯನ್ನು ಕಟ್ಟಿದ್ದು ಕಪಿಸೈನ್ಯ ಎಂಬುದು ಕೂಡ ಪೂರ್ತಿ ನಿಜವಲ್ಲ. ಅದನ್ನು ನಿರ್ಮಿಸಿದ್ದು ರಾಮನ ಅಂತಃಶಕ್ತಿ. ಇಲ್ಲವಾದರೆ, ಯಾರಾದರೂ ಮಂಗಗಳನ್ನಿಟ್ಟುಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಲು ಸಾಧ್ಯವೇ? ವಾಲ್ಮೀಕಿಗೆ ರಾಮನನ್ನು ಪವಾಡಪುರುಷನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿ (ಪುರುಷೋತ್ತಮ) ಜನರಿಗೆ ಆದರ್ಶವಾಗಿ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಹಾಗಾಗಿ ಕಪಿಗಳ ನೆರವಿನಿಂದ ರಾಮ ಸೇತುವೆ ಕಟ್ಟಿದ ಎಂಬಂತೆ ಬಿಂಬಿಸಿದರು.
 
ವನವಾಸಕ್ಕೆ ಹೋದಾಗ ರಾಮನಿಗೆ 27 ವರ್ಷ
ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ. ಆದರೆ ಅವನು ಖಾಲಿ ಕೈಲಿ ಹೋಗಬೇಕೆಂದು ಕೈಕೇಯಿ ತಾಕೀತು ಮಾಡಿದಳು. ಅದಕ್ಕೂ ಮುನ್ನವೇ, ಅರಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ರಾಮ ನಿರ್ಧರಿಸಿದ್ದ. ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುವಸ್ತ್ರ ಉಟ್ಟುಕೊಳ್ಳಲೂ ಅವನು ಸೂಚಿಸಿದ್ದ.

ರಾಮ ಶಿವಧನುಸ್ಸನ್ನು ಮುರಿಯಲಿಲ್ಲ!
ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕತೆ ಚಾಲ್ತಿಯಲ್ಲಿದೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ. ಶಿವನ ಧನುಸ್ಸನ್ನು ಹೆದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ. ಇದೊಂದು ರೋಚಕ ಕತೆಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.


ರಾಮಾಯಣದ ಪ್ರಕಾರ ದೇವರು ಕೇವಲ 33
ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (ಮೂರು ಕೋಟಿ) ದೇವರು, ಮೂವತ್ತಮೂರು ಕೋಟಿ ದೇವರು ಎಂದೆಲ್ಲ ಹೇಳಲಾಗುತ್ತದೆ. ಸರಿಯಾಗಿ ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ. ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಮಾತ್ರ. ರಾಮಾಯಣದ ಅರಣ್ಯಕಾಂಡದಲ್ಲಿ ಇದರ ಉಲ್ಲೇಖವಿದೆ.

ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ
ಮದುವೆಯಾಗಿ ಬಹಳ ವರ್ಷಗಳವರೆಗೂ ದಶರಥ ರಾಜನಿಗೆ ಮಕ್ಕಳಿರಲಿಲ್ಲ. ಮೂವರು ಹೆಂಡಿರಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಿರಲಿಲ್ಲ. ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು. 'ನನ್ನ ನಂತರ ಅಯೋಧ್ಯೆಯ ಕತೆಯೇನು?' ಆಗ ಪುತ್ರಕಾಮೇಷ್ಠಿ ಯಾಗ ಮಾಡಿದ. ರಾಮ ಹುಟ್ಟಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರು ಹುಟ್ಟಿದರು.


ಲಂಕೆ ನಿಜವಾಗಿ ರಾವಣನದ್ದಲ್ಲ
ಲಂಕೆಗೆ ರಾವಣನ ಲಂಕೆ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಬೇರನದು. ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ನಂ.1 ಶ್ರೀಮಂತ ಕುಬೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣ. ಅವನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತು. ಕುಬೇರ ಅಷ್ಟೇನೂ ಪರಾಕ್ರಮಿಯಲ್ಲ. ಆದರೆ ರಾವಣ ಭಯಂಕರ ಶಕ್ತಿವಂತ. ಅಣ್ಣನನ್ನೇ ಸೋಲಿಸಿ ಲಂಕೆಯನ್ನು ಗೆದ್ದು ತಾನು ಆಳತೊಡಗಿದ.


ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ!
ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.

ಅಪ್ಪನ ಮೇಲೇ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ
ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದೂ ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ, ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ. ಆಲಕ್ಷ್ಮಣನಿಗೆ ಸಮಾಧಾನ ಮಾಡಿದ.


ಸೀತೆಗಾಗಿ ಇಂದ್ರ ಪಾಯಸ ತಂದಿದ್ದ!
ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲೇ ಇಂದ್ರ ಅಲ್ಲಿಗೆ ಹೋಗಿದ್ದ. ಸೀತೆಯ ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ಗೊತ್ತಾಯಿತು. ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು, ತನ್ನ ಮಂತ್ರಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)