May 4, 2013

ಕಂಬಾರರ ಎರಡು ಕಾದಂಬರಿಗಳು


‘ಕಂಬಾರರ ಎರಡು ಕಾದಂಬರಿಗಳು’ ಪುಸ್ತಕದ ಒಳನೋಟ :

ಪ್ರಸ್ತುತದ ಈ ಪುಸ್ತಕದಲ್ಲಿ ಕಂಬಾರರ ಕಾದಂಬರಿಗಳಲ್ಲಿ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ಮಾತ್ರ ಅಧ್ಯಯನದ ವಿಷಯವಾಗಿ ತೆಗೆದುಕೊಂಡು ಅವುಗಳು ಬಿಚ್ಚಿಡುವ ವಿಶೇಷ ಅಂಶಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ಅಭ್ಯಸಿಸಿ ಈ ಪುಸ್ತಕವನ್ನು ರಚಿಸಿದ್ದೇನೆ. ಈ ವಿಶ್ಲೇಷಣಾತ್ಮಕ ಅಧ್ಯಯನದ ಸಾರವನ್ನು ಈ ಕೆಳಗಿನಂತೆ ವಿವರಿಸುತ್ತೇನೆ.
 'ಸಿಂಗಾರೆವ್ವ ಮತ್ತು ಅರಮನೆ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ ಚರಿತ್ರೆಯ ಪುಟಗಳಿಂದ ತೆಗೆದುಕೊಂಡ ಈ ಕಾದಂಬರಿಯ ಕಥಾವಸ್ತುವಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ತನ್ನ ಹುಸಿ ಪ್ರತಿಷ್ಠೆ, ಕ್ರೌರ್ಯ ಮತ್ತು ತನ್ನ ದೌರ್ಬಲ್ಯಗಳಿಂದ ನಿಧಾನವಾಗಿ ಅಧಃಪತನಗೊಳ್ಳುವ ಕಟುವಾಸ್ತವ ಚಿತ್ರಣವಿದೆ. ಕಾದಂಬರಿಯ ಮುಖ್ಯವಸ್ತು ಶ್ರೀಮಂತಿಕೆ ಮತ್ತು ಅದರ ಅವನತಿ. ನಂಪುಂಸಕನೂ ಕ್ರೂರಿಯೂ ಆದ ದೇಸಾಯಿಯ ಪಾತ್ರದ ಮೂಲಕ ನೈತಿಕ ಪತನವನ್ನು ನಿರೂಪಿಸಲಾಗಿದೆ. ಜೊತೆಗೆ ಕಾದಂಬರಿಯಲ್ಲಿ ಗಂಡು ಹೆಣ್ಣುಗಳು ಉಸಿಗಟ್ಟಿಸುವ ಸಂಪ್ರದಾಯದ ಸುಳಿಯಲ್ಲಿ ಸಿಕ್ಕಿಬಿದ್ದು ಹೊರಬರಲು ಪ್ರತಿಭಟಿಸುತ್ತ ಅದರಿಂದ ಹೊರಬರಲು ಪ್ರಯತ್ನಿಸಿದರೂ ಮತ್ತೆ ಅದರ ಕೇಂದ್ರದಲ್ಲಿ ಸಿಕ್ಕು ಅವನತಿಯನ್ನು ಹೊಂದುವ ಚಿತ್ರಣವಿದೆ. ಜನಸಾಮಾನ್ಯರು ಕಂಡರಿಯದ ಅರಮನೆಯ ಸ್ವಾರ್ಥ ಮತ್ತು ಕ್ರೂರ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಹೀಗೆ ಊಳಿಗಮಾನ್ಯ ವ್ಯವಸ್ಥೆಯ ಸ್ವಪ್ರತಿಷ್ಠೆ, ಅಹಂಕಾರ, ಕ್ರೌರ್ಯಗಳು ಹಾಗೂ ತನ್ನ ದೌರ್ಬಲ್ಯಗಳಿಂದ ದುರಂತಗಳ ಸರಮಾಲೆಯ ಕಥಾ ಸಾರಾಂಶವನ್ನು ಒಳಗೊಂಡ ಈ ಕಾದಂಬರಿ ಕಂಬಾರರ ಸೃಜನಶೀಲತೆಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.
'ಶಿಖರಸೂರ್ಯ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ  ಇತಿಹಾಸಕಾರರು ನಿರೂಪಿಸುವ ಜಾನಪದ ಕಥಾಹಂದರವನ್ನುಳ್ಳ ಶಿಖರಸೂರ್ಯ ಕಾದಂಬರಿಯ ವಿಶ್ಲೇಷಣೆಯಿದೆ. ಆಧುನಿಕತೆಯ ಬಿರುಗಾಳಿಗೆ ಸಿಕ್ಕು ನಲಗುತ್ತಿರುವ ಪರಂಪರಾಗತ ಮೌಲ್ಯಗಳನ್ನು ಪುನಃ ಸ್ಥಾಪಿಸುವ ಧೋರಣೆ ಈ ಕಾದಂಬರಿಯಲ್ಲಿದೆ. ಕ್ಷಿಪ್ರ ಪ್ರಗತಿ, ದುರಾಸೆ, ಸ್ವಾರ್ಥ, ಮೈಗಳ್ಳತನ, ಮತ್ಸರಗಳು ಕೈಗಾರೀಕರಣದ ಅನಂತರದ ಆಧುನಿಕ ಬದುಕಿಗೆ ಬಂದ ಕೊಡುಗೆಗಳಾಗಿವೆ. ಅಭಿವೃದ್ಧಿಯ ಗುಂಗಿನಲ್ಲಿರುವ ಸಮಾಜಕ್ಕೆ ಇವೆಲ್ಲ ಸಹಜವೆನಿಸಿರುವಾಗ ಆಧುನಿಕಪೂರ್ವ ನೆಮ್ಮದಿಯ ಬದುಕಿನ ಆಕಾರಗಳನ್ನು ನೆನಪಿಸಿಕೊಡಲು ಈ ಕಾದಂಬರಿ ಪ್ರಯತ್ನಿಸುತ್ತದೆ. ಪ್ರಾಮಾಣಿಕ ದುಡಿಮೆಯಿಂದ ಲಭ್ಯವಾಗುವ ಸಂಪತ್ತನ್ನು ಹಂಚಿಕೊಂಡು ಉಣ್ಣುತ್ತ ಸರಳತೆಯಿಂದ ಬದುಕಿದ ಪರಂಪರಾಗತ ಜೀವನ ಶೈಲಿಗೆ ಆಧುನಿಕ ಜೀವನ ಕ್ರಮಗಳು ಆಘಾತವನ್ನುಂಟು ಮಾಡುತ್ತವೆ. ಧಾನ್ಯದಿಂದ ಚಿನ್ನ ಮಾಡುವ ಮಂತ್ರವು ಆಧುನಿಕತೆಯ ದೈಹಿಕ ಶ್ರಮವಿಲ್ಲದೇ ಪೊಳ್ಳು ಸತ್ಯದಿಂದ ಬದುಕುವ ಸ್ಥಿತಿ ಬಹುಕಾಲ ಬಾಳುವುದಿಲ್ಲವೆಂದು ಕಾದಂಬರಿ ನಿರೂಪಿಸುತ್ತದೆ.
ಕಂಬಾರರ ಕಾದಂಬರಿಗಳ ತೌಲನಿಕ ಅಧ್ಯಯನ ಎಂಬ ಅಧ್ಯಾಯದಲ್ಲಿ ಅಧ್ಯಯನದಲ್ಲಿ ಬಳಸಿರುವ ಸಿಂಗಾರೆವ್ವ ಮತ್ತು ಅರಮನೆ ಹಾಗೂ ಶಿಖರಸೂರ್ಯ ಕಾದಂಬರಿಗಳಲ್ಲಿನ ವಿಶಿಷ್ಟತೆಗಳು, ಅವುಗಳು ಹೊಂದಿರುವ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸಲಾಗಿದೆ. ಕಂಬಾರರ ವಿಶಿಷ್ಟ ಕಲಾಪ್ರತಿಭೆಯಲ್ಲಿ ಮೂಡಿಬಂದ ವಿಭಿನ್ನ ನೆಲೆಗಳ ಕಾದಂಬರಿಗಳನ್ನು ತೌಲನಿಕ ಅಧ್ಯಯನ ಕ್ರಮದಿಂದ ಅವುಗಳಲ್ಲಿನ ಸಾಮಾನ್ಯವಾದ ಅಂಶಗಳ ಜೊತೆಗೆ ಅವುಗಳು ಹೊಂದಿರಬಹುದಾದ ವಿಶೇಷತೆಯನ್ನು ಈ ಅಧ್ಯಾಯದಲ್ಲಿ ಉದಾಹರಣಾಸಹಿತವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಕೊನೆಯ ಭಾಗವಾದ ಕಾದಂಬರಿಗಳಲ್ಲಿನ ವಸ್ತು, ತಂತ್ರ, ಭಾಷೆ ಮತ್ತು ಆಶಯ ಎಂಬ ಅಧ್ಯಾಯದಲ್ಲಿ ಕಂಬಾರರ ಸೃಜನಶೀಲ ಪ್ರತಿಭೆಯಲ್ಲಿ ರಚನೆಯಾದ ಈ ಕಾದಂಬರಿಗಳಲ್ಲಿನ ಕಥಾವಸ್ತು, ಬಳಸಿರುವ ತಂತ್ರಗಾರಿಕೆ, ವಿಶೇಷವಾದ ಭಾಷೆಯ ಬಳಕೆ  ಮತ್ತು ಕಾದಂಬರಿಗಳು ಬಿಚ್ಚಿಡುವ ಆಶಯಗಳನ್ನು ಈ ಅಧ್ಯಾಯದಲ್ಲಿ ಕಾಣಬಹುದಾಗಿದೆ. ಕಂಬಾರರು ಊಳಿಗಮಾನ್ಯ ವ್ಯವಸ್ಥೆಯ ಅವಸಾನದ ದಿನಗಳನ್ನು ವರ್ಣಿಸುವ ಕಥಾವಸ್ತುವನ್ನು ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಯಲ್ಲಿ ಬಳಸಿದರೆ, ಜನಪದ ಪುರಾಣದಲ್ಲಿನ ಕಥಾಹಂದರವನ್ನು ಶಿಖರಸೂರ್ಯದಲ್ಲಿ ಬಳಸಿದ್ದಾರೆ. ಎರಡೂ ಕಾದಂಬರಿಗಳಲ್ಲೂ ಭಿನ್ನ ಭಿನ್ನವಾದ ತಂತ್ರಗಾರಿಕೆಯನ್ನು ಬಳಸಿ ಕಾದಂಬರಿಗಳನ್ನು ರೂಪಿಸಿದ್ದಾರೆ. ಕಂಬಾರರು ರಚನೆಯಲ್ಲಿ ಬಳಸಿದ ಉತ್ತರ ಕರ್ನಾಟಕದ ಗ್ರಾಮ್ಯ ಮತ್ತು ಶಿಷ್ಟ ಭಾಷೆಗಳ ಬಳಕೆ ಮಾಡಿ ಕಾದಂಬರಿಗಳನ್ನು ನಿರ್ಮಿಸಿದ್ದಾರೆ. ಕೊನೆಯದಾಗಿ ಕಾದಂಬರಿಗಳು ಬಿಚ್ಚಿಡುವ ಆಶಯಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ.
ಈ ಪುಸ್ತಕದ ರಚನೆಗಾಗಿ ಆಯ್ದುಕೊಂಡಿರುವ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳಲ್ಲಿ ಪ್ರತಿಯೊಂದು ಪಾತ್ರವೂ, ಪ್ರತಿಯೊಂದು ಘಟನೆಯೂ ಪ್ರಮುಖವಾದವುಗಳು ಮತ್ತು ಪ್ರತಿಯೊಂದು ವಿಶಿಷ್ಟತೆಯಿಂದ ಕೂಡಿರುವಂಥವುಗಳು. ಇಂತಹ ವಿವಿಧ ನೆಲೆಗಳ ಪಾತ್ರ-ಸನ್ನಿವೇಶಗಳನ್ನು ಈ ಕೃತಿಯ ಮೂಲಕ ಬಿಚ್ಚಿಡುವ ಯತ್ನ ನನ್ನದಾಗಿದೆ. ಕಂಬಾರರ ಕೃತಿಗಳಲ್ಲಿ ಬಹುಮುಖಿ ನೆಲೆಯ ಪಾತ್ರ, ಸನ್ನಿವೇಶಗಳ ಸೃಷ್ಟಿಯನ್ನು ಕಾಣಬಹುದು. ಪ್ರತಿಯೊಂದು ಅಂಶವು ಅವರಿಗೆ ಪ್ರಾಮುಖ್ಯತೆಯಾಗಿರುತ್ತದೆ. ಈ ವಿಶಿಷ್ಟ ಗುಣದಲ್ಲ್ಲಿ ಕುವೆಂಪುರವರನ್ನು ಮಾತನ್ನು ಗಮನಿಸಬಹುದು. ಅದು 'ಮಲೆಗಳಲ್ಲಿ ಮಧುಮಗಳು' ಕಾದಂಬರಿಯ ಮೊದಲಲ್ಲಿ ನೀಡಿರುವ ಸಾಲುಗಳು ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಇಲ್ಲ ವ್ಯರ್ಥ, ನೀರೆಲ್ಲವೂ ತೀರ್ಥ. ಹೀಗೆ ಯಾವುದೇ ಒಂದು ಕೃತಿಯ ಪ್ರತಿಯೊಂದು ಘಟನೆಗಳು, ಪ್ರತಿಯೊಂದು ಪಾತ್ರಗಳು ಸಹಾ ಪ್ರಮುಖವಾಗುವುದನ್ನು ಕಂಬಾರರ ಈ ಕಾದಂಬರಿಗಳ ಮುಖಾಂತರ ತಿಳಿಯಬಹುದು.
ಒಟ್ಟಾರೆಯಾಗಿ ನನ್ನ ಅರಿವಿನ ಮಿತಿ ಮತ್ತು ಸಾಧ್ಯತೆಯಲ್ಲಿ ಚಂದ್ರಶೇಖರ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ನೋಡುವ ಪ್ರಯತ್ನವಾಗಿ ಈ ಪುಸ್ತಕ ರಚನೆಯಾಗಿದೆ. ಒಟ್ಟಾರೆ ಈ ಕಾದಂಬರಿಗಳನ್ನು ಸಮಗ್ರವಾಗಿ ಚರ್ಚಿಸುವ ಕೆಲಸ ಈ ಪುಸ್ತಕದ ಮೂಲಕ ನಡೆದಿದೆನ್ನಬಹುದು ಹಾಗೂ ಕಂಬಾರರ ಕಲಾಕೃತಿಗಳನ್ನು ಅಭ್ಯಸಿಸುವ ಅವಕಾಶ ಈ ಮೂಲಕ ಲಭಿಸಿದೆ.


ಕೃತಿ : ಕಂಬಾರರ ಎರಡು ಕಾದಂಬರಿಗಳು
ಲೇಖಕರು : ಮಂಜುನಾಥ.ಎಂ.ಕೆ
ಪ್ರಕಾಶಕರು : ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು. ಪೋನ್ : 9880802551