Thursday, August 20, 2015

ನನ್ನ ಹೊಸ ಪುಸ್ತಕ - ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ

ನನ್ನ ನಾಲ್ಕನೇ ಕೃತಿ 'ರಾಮನಗರ ಜಿಲ್ಲೆಯ ಸಾಂಸ್ಕೃತಿ ಪರಂಪರೆ" .......
ಗುರುಗಳಾದ ಮಧುಸೂಧನಾಚಾರ್ಯ ಜೋಷಿ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ನಾಡಿನ ಹೆಸರಾಂತ ಸಾಹಿತಿಗಳಾದ ಶತಾಯುಷಿ ದೇಜಗೌ ಅವರು ನನ್ನ ಕೃತಿಯ ಬಗ್ಗೆ ಹಾರೈಕೆಯ ನುಡಿಗಳನ್ನು ಬರೆದಿರುವುದು ಸಂತೋಷದ ಸಂಗತಿ. ಅವರಿಗೆ ನಾನು ಚಿರ ಋಣಿ.....

ಕೃತಿಯ ಒಳನೋಟ :
1. ರಾಮನಗರ ಜಿಲ್ಲೆಯಲ್ಲಿನ ಬೌದ್ಧ ಮತ್ತು ಜೈನ ಧರ್ಮದ ಕುರುಹುಗಳು 
2. ಪ್ರಾಚೀನ ಘಟಿಕಾಸ್ಥಾನ : ಚನ್ನಪಟ್ಟಣ 
3. ಹೊಯ್ಸಳರ ಕಾಲದ ಅಪ್ರಕಟಿತ ಶಾಸನಗಳು
4. ರಾಮನಗರ ಜಿಲ್ಲೆಯ ಪ್ರಾಚೀನ ದೇವಾಲಯಗಳು
5. ರಾಮನಗರ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು
6. ಶಾಸನಗಳ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಪಾಳೆಯಗಾರರ ಇತಿಹಾಸ
7. ರಾಮನಗರ ಜಿಲ್ಲೆಯ ಹೊಯ್ಸಳರ ಶಾಸನಗಳು
8. ಚನ್ನಪಟ್ಟಣ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು
9. ಶಾಸನಗಳ ಹಿನ್ನೆಲೆಯಲ್ಲಿ ಮಾಗಡಿ ತಾಲ್ಲೂಕು : ಒಂದು ಅಧ್ಯಯನ 
10. ಮಾಕಳಿಯ ಪಾಳೆಯಗಾರರು : ಒಂದು ಅವಲೋಕನ 
11. ಇಮ್ಮಡಿ ಜಗದೇವರಾಯನ ಮಗ ದೇವರಾಯನ ಶಾಸನ 
12. ಚನ್ನಪಟ್ಟಣ ತಾಲ್ಲೂಕಿನ ಶಾಸನೋಕ್ತ ಮಹಿಳೆಯರು 
13. ಚನ್ನಪಟ್ಟಣ ತಾಲ್ಲೂಕಿನ ನವಶೋಧಿತ ಪ್ರಾಗೈತಿಹಾಸಿಕ ನೆಲೆಗಳು 

14. ಕೆಲವು ಪ್ರಾಚೀನ ಶಾಸನಗಳು : ಪುನರ್ ಪರಿಶೀಲನೆ
277 ಪುಟಗಳುಳ್ಳ ಈ ಕೃತಿಯ ಪ್ರತಿಗಳಿಗಾಗಿ ಸಂಪರ್ಕಿಸಿ : 9844674004

Monday, May 4, 2015

ತೇಜಸ್ವಿಗೆ ಕುವೆಂಪು ಬರೆದ ಪತ್ರಗಳು

tejasvige kuvempu baredha patragalu  
ಪತ್ರ 1 'ಉದಯರವಿ' ತಾ. 24.1.56 ಪ್ರೀತಿಯ ಚಿರಂಜೀವಿ ತೇಜಸ್ವಿಗೆ, ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು. ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳು ಮಾಡದೆ ನಾಲ್ಕಾರು ಸಾರಿ ಶಾಂತ ಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು. ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು- ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು. ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ- ನೀನೇನೋ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ. ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದುವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ. ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು. ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ತಿಳಿಸಿದಂತೆ- ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಆವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ. ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವ ಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿ ಕೊಡುತ್ತದೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ, ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ. ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗ ತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗ ತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. 'ಜೇನಾಗುವಾ' ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ. ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ. ನೀನು ಶ್ರೀರಾಮಾಯಣದರ್ಶನಂ ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು. ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು. ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವ ತನಕ ಅದನ್ನೇ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದಲ್ಲಿ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಎಸ್‌ಎಸ್‌ಎಲ್‌ಸಿ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಹೊತ್ತಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು, ಈಗ ನೀನು ಆರ್ಟ್ಸ್ ತೆಗೆದುಕೊಂಡಿದ್ದೀಯೆ, ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನ ಮಾಡಬಲ್ಲುದು. ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆಯು ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ. ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ, ಶ್ರೇಯಸ್ಸು, ಅಭ್ಯುದಯ, ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅವನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯದ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈ ಚಾಚಿದರೆ! ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು. ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!! ಆಶೀರ್ವಾದಗಳು. -ಕುವೆಂಪು * * * ಪತ್ರ 2 'ಉದಯರವಿ' 4.5.75 ಚಿ|| ತೇಜಸ್ವಿಗೆ, ನಿನ್ನ ತಾರೀಖಿಲ್ಲದ ಕಾಗದ ತಲುಪಿತು. ನಿನ್ನ 'ನಿಗೂಢ ಮನುಷ್ಯರು' ಸಿನಿಮಾ ಆಗುವ ವಿಚಾರ ಪತ್ರಿಕೆಯಲ್ಲಿ ಬಂದ ಹಾಗಿತ್ತು. ಯಾರಾದರೂ ಮಾಡಲಿ, ಚೆನ್ನಾಗಿ ಜಾತಿ ಪಕ್ಷಪಾತದ ಸೋಂಕಿಲ್ಲದೆ ಮಾಡಬೇಕಾದ್ದು ಮುಖ್ಯ. ಈಗ ಬ್ಯಾಂಕಿನ ಬಡ್ಡಿಯನ್ನು ಏರಿಸಿದ್ದಾರೆ 20%ಕ್ಕೆ. ನಾನು 30000 ಬೆಳೆಸಾಲ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದೀಯ? ಬೆಳೆಸಾಲ ಎಂದರೆ ಏನು? ಯಾವಾಗ ತೀರಿಸಬೇಕು? ನೀನು ಹಿಂದೆಯೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದನ್ನೆಲ್ಲ ತೀರಿಸಿಯಾಯಿತೇ? ಅದಕ್ಕೆ ಎಷ್ಟು ಬಡ್ಡಿ ಹಾಕಿದ್ದರು ಅಥವಾ ಹಾಕಿದ್ದಾರೆ. ಆ ಸಾಲಕ್ಕೂ ಈ ಸಾಲಕ್ಕೂ ಏನು ವ್ಯತ್ಯಾಸ? ಏತಕ್ಕಾಗಿ ಈ ಹೊಸ ಸಾಲ ಎತ್ತುತ್ತೀಯಾ? ಈ ಸಾರಿ ಫಸಲು ಚೆನ್ನಾಗಿರುವುದರಿಂದ ಸಾಲವನ್ನೆಲ್ಲಾ ತೀರಿಸಿ ಬಿಡುತ್ತೇನೆ ಎನ್ನುತ್ತಿದ್ದಿ. ಆದರೆ ಸಾಲ ತೀರಿಸುವುದಕ್ಕೆ ಬದಲಾಗಿ 30000 ಎತ್ತುತ್ತೇನೆ ಎಂದು ಬರೆದಿದ್ದೀಯಲ್ಲಾ? ನಾನೀಗ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು 'ಬೆರಳ್ಗೆ ಕೊರಳ್' ನಾಟಕವನ್ನು ಅಚ್ಚು ಹಾಕಿಸುತ್ತಿದ್ದೇನೆ. ಎರಡಕ್ಕೂ ಒಟ್ಟು ಸುಮಾರು 35-40 ಸಾವಿರವಾಗುತ್ತದೆ. ಅಲ್ಲದೆ ತಾರಿಣಿಯ ಮನೆ ಕಟ್ಟಲೂ ಪ್ರಾರಂಭಿಸಿಯಾಗಿದೆ. ಅದಕ್ಕೂ ಬಹಳ ಬೇಕಾಗುತ್ತದೆ. ಆದ್ದರಿಂದ ತೊಂದರೆಯಾಗಿದೆ. ಆದ್ದರಿಂದ 30000 ಕೊಡಲು ಸಾಧ್ಯವಿಲ್ಲ. ಏನಾದರೂ ಅಲ್ಪಕ್ಕೆ ಪ್ರಯತ್ನ ಮಾಡಬಹುದೇನೋ ಬ್ಯಾಂಕಿನ ಲೆಖ್ಖ ನೋಡಿ ಹೇಳಬೇಕಾಗುತ್ತದೆ. ಅಲ್ಲದೆ ಫಿಕ್ಸೆಡ್ ಡಿಪಾಸಿಟ್ಟುಗಳನ್ನು ಅರ್ಧದಲ್ಲಿ ತೆಗೆಯಲಾಗುವುದಿಲ್ಲ. ಒಂದುವೇಳೆ ನಿನಗೆ ಕೊಟ್ಟರೆ ನನಗೆ ಬೇಕಾದಾಗ ಯಾವಾಗ ಒಟ್ಟಿಗೆ ತೀರಿಸಲು ಸಾಧ್ಯವಾಗುತ್ತದೆ? ಪುಸ್ತಕಕ್ಕೆ ಕೊಡಬೇಕಾದ್ದನ್ನು ಒಂದು ವೇಳೆ ತಾತ್ಕಾಲಿಕವಾಗಿ ನಿನಗೆ ಕೊಟ್ಟರೆ ಪುಸ್ತಕ ಅಚ್ಚು ಮುಗಿದೊಡನೆ ಪ್ರೆಸ್ಸಿನವರಿಗೆ ಕೊಡಲು ನೀನು ತಟಕ್ಕನೆ ಕೊಡಲು ಸಾಧ್ಯವಾಗುತ್ತದೆಯೆ? ಹಿಂದೆ ನಿನ್ನ ಜೀಪಿನ ವ್ಯವಹಾರದಲ್ಲಿ 8000 ಮತ್ತು ಸ್ಕೂಟರಿನ ವ್ಯವಹಾರದಲ್ಲಿ 4000 ಕೊಟ್ಟಿದ್ದನ್ನೆ ಇದುವರೆಗೂ ಹಿಂದಿರುಗಿಸಲು ನಿನಗೆ ಸಾಧ್ಯವಾಗಿಲ್ಲ!!! ನೀನು ಹಿಂದೆ ಬ್ಯಾಂಕಿನಿಂದ ನಿನಗೆ 80000 ಸ್ಯಾಂಕ್ಷನ್ ಆಗಿದೆ ಎಂದು ಹೇಳುತ್ತಿದ್ದೆ. ಅದೆಲ್ಲಾ ಏನಾಯಿತು? ತೋಟದ ಜಮಾ ಖರ್ಚು ವೆಚ್ಚ ವಿವರ ಇಡುತ್ತಿದ್ದೀಯಾ? ನಾನು ಕೇಳಿದ್ದಕ್ಕೆಲ್ಲ ತುಸು ವಿವರವಾಗಿ ತಿಳಿಸುತ್ತೀಯ ಎಂದು ನಂಬಿದ್ದೇನೆ. ತಾರಿಣಿ-ಪ್ರಾರ್ಥನಾ ಈಗ ಇಲ್ಲಿಯೆ ಮನೆಯಲ್ಲಿ ಇದ್ದಾರೆ. ಚಿದಾನಂದರು ಮೊನ್ನೆ ದೆಹಲಿಗೆ, ಇಂಟರ್‌ವ್ಯೂಗೆ ಹೋಗಿದ್ದಾರೆ. ಐದಾರು ದಿನಗಳಾಗುತ್ತದಂತೆ ಅವರು ಬರುವುದು. ಅವರಿಗೆ ಸೋವಿಯತ್ PhD ಸ್ಕಾಲರ್‌ಷಿಪ್ ಸಿಗುವ ಸಂಭವವಿದೆಯಂತೆ. ಮೂರುವರ್ಷ ರಷ್ಯಾದಲ್ಲಿರುವುದಕ್ಕೂ ಹೋಗಿಬರುವುದಕ್ಕೂ ಅವರೇ ಖರ್ಚು ಕೊಡುತ್ತಾರಂತೆ. ಮೊನ್ನೆ ಪ್ರಭುಶಂಕರ್ ಗುನ್ನರ್‌ಮಿರ್‌ಡಾಲ್ ಅರ್ಥಶಾಸ್ತ್ರಜ್ಞನ The Challenge of world poverty (ದಿ ಛಾಲೆಂಜ್ ಆಫ್ ವರ್ಲ್ಡ್ ಪಾವರ್ಟಿ) ಪುನಃ ಓದಲು ಕೊಟ್ಟಿದ್ದಾರೆ. ಆದರೆ Soft States ಇಂಡಿಯಾದಲ್ಲಿ ಆಗುತ್ತಿರುವ ಅವಿವೇಕ ಅನ್ಯಾಯಕ್ಕೆಲ್ಲ ಮೂಲ ಕಾರಣಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾನೆ. ಎಷ್ಟು ಹೊರದೇಶಗಳಿಂದ ಸಾಲವೆತ್ತಿದರೂ ನಮ್ಮ ದೇಶದಲ್ಲಿಯೆ ಆರ್ಥಿಕ ಮತ್ತು ಸಾಮಾಜಿಕ ಕ್ರ್ರಾಂತಿ ಆಗದಿದ್ದರೆ ಎಂದಿಗೂ ಈ ಬಡತನ ಹೋಗುವುದಿಲ್ಲ ಎಂದು ಬರೆದಿದ್ದಾನೆ. ಚಿ|| ರಾಜೇಶ್ವರಿ ನಮಗೆ ಬರೆದ ಕಾಗದದಲ್ಲಿ ಮೊದಲ ಮಳೆಗೆ ಶೇಕಡ 30% ಹೂವು ಮಾತ್ರ ಅರಳಿವೆ. ಇನ್ನೊಂದು ಮಳೆ ಚೆನ್ನಾಗಿ ಆದರೆ ಉಳಿದ ಹೂ ಅರಳಬಹುದು ಎಂದು ಬರೆದಿದ್ದಳು. ನೀನು ಬರೆದಿರುವ ಭಾರಿ ಮಳೆಗಳಿಗೆ ಹೂವು ಪೂರ್ತಿ ಅರಳಿದುವೆ? ಮುಂದಿನ ಫಸಲು ಹೇಗಾಗುತ್ತಿದೆ? ಆಶೀರ್ವಾದಗಳೊಂದಿಗೆ -ಕುವೆಂಪು * ಅಂದಹಾಗೆ, ಕನ್ನಡ ಸಾಂಸ್ಕೃತಿಕ ಲೋಕದ ಪ್ರಸಿದ್ಧರು ತೇಜಸ್ವಿ ಅವರೊಂದಿಗೆ ಸಂವಾದಿಸಿರುವ ಪತ್ರಗಳೆಲ್ಲ ಒಟ್ಟಾಗಿ, 'ತೇಜಸ್ವಿ ಪತ್ರಗಳು' (ಪ್ರ: ಕನಸು ಪ್ರಕಾಶನ, ದೇರ್ಲ, ದಕ್ಷಿಣ ಕನ್ನಡ) ಹೆಸರಿನಲ್ಲಿ ಈಗ ಪುಸ್ತಕರೂಪ ತಾಳಿವೆ. ನರೇಂದ್ರ ರೈ ದೇರ್ಲ ಅವರು ಸಂಪಾದಿಸಿರುವ ಈ ಕೃತಿ (660 ಪುಟ, 700ಕ್ಕೂ ಹೆಚ್ಚು ಪತ್ರಗಳು) ಮೇ 10ರಂದು ಪುತ್ತೂರಿನಲ್ಲಿ ಬಿಡುಗಡೆ ಆಗಲಿದೆ. 
source : prajavani.net

Thursday, March 26, 2015

ನುಡಿಮುತ್ತುಗಳು

 • ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
 • ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ ಅಂದುಕೊಳ್ಳುತ್ತಾನೆ.
 • ತಾಯ್ತನ ಎಂಬುದು ಎಲ್ಲ ಸ್ತ್ರೀಯರೂ ಬಯಸುವ ಅವಕಾಶ. ಹಾಗಂತ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.
 • ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
 • ಅಕಸ್ಮಾತ್ತಾಗಿ ಹಾವನ್ನು ತುಳಿದು ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು ಕಡಿ, ಕಡಿ ಎಂದುಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್.
 • ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ.
 • ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
 • ವಾದ್ರಾ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಭೂಮಿ ಬಗ್ಗೆ ಈ ವ್ಯಕ್ತಿಯ ಹಸಿವನ್ನು ನೋಡಿದರೆ, ಕಾಶ್ಮೀರ ಹಾಗಿರಲಿ, ಲಾಹೋರ್- ಇಸ್ಲಾಮಾಬಾದ್ಗಳನ್ನು ಉಳಿಸಿಕೊಡಿ ಅಂತ ಪಾಕಿಸ್ತಾನ ಕೇಳಬಹುದು.
 • ಭಾರತೀಯ ರಾಜಕಾರಣಿಗಳನ್ನು ಮೂರ್ಖರು ಎನ್ನುವಂತಿಲ್ಲ. ಜನಕ್ಕೆ ಹಾಗೆ ಹೇಳಬಹುದು. ಪ್ರತಿಬಾರಿಯೂ ನೂರು ಕೋಟಿ ಮಂದಿಯನ್ನು ಅವರು ನಂಬಿಸುತ್ತಾರೆ.
 • ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು ರಹಸ್ಯ ಎಂದರೆ- ಅವರ ವಯಸ್ಸು.
 • ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
 • ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
 • ಮಲಗುವಾಗ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯ ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಪಕ್ಕದಲ್ಲೇ ಮಲಗುತ್ತಾರೆ.
 • ಕೆಲವು ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
 • ದಾಂಪತ್ಯ ಚೆನ್ನಾಗಿ ಇರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
 • ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಾಗೆಂದು ತುಪ್ಪ ತಿನ್ನಬೇಕು ಎಂದೆನಿಸಿದಾಗಲೆಲ್ಲ ಸಾಲ ಮಾಡಬಾರದು.
 • ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು ಮುಂದಿನ ಜೀವನದ ಬಗ್ಗೆ ಗಮನಹರಿಸಿ.
 • ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ ಮಾಡಿ. ಪರಿಶ್ರಮಪಡದಿದ್ದರೆ ಅದೃಷ್ಟವೂ ನಿಮ್ಮ ಮನೆ ತನಕ ಬರುವುದಿಲ್ಲ.
 • ನಿಮಗೇನು ಅನ್ನಿಸುತ್ತೆ ಎಂಬುದರ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆದರೆ ನೀವು ಏನು ತಿಳಿದುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆ ನಿರ್ಧಾರ ಹೆಚ್ಚು ಗಟ್ಟಿಯಾಗಿರುತ್ತದೆ
 • ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ.ನೀವು ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.
 • ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ.
 • ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೈಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ.
 • ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿಎಂಬುದರಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷಪಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ.
 • ನಿಮಗೆ ಹಾರಲು ಸಾಧ್ಯವಿಲ್ಲವೇ? ಹಾಗಾದರೆ ಓಡಿ. ನಿಮ್ಮಲ್ಲಿ ಓಡಲು ಶಕ್ತಿ ಇಲ್ಲವೇ, ನಡೆದಾಡಿ. ನಿಮಗೆ ನಡೆಯಲೂ ಆಗದಿದ್ದರೆ ತೆವಳಿಕೊಂಡು ಹೋಗಿ. ನೀವು ಏನೇ ಮಾಡಿ, ಮುನ್ನಡೆಯುತ್ತಲೇ ಇರಿ. ಎಲ್ಲಿಯೂ ನಿಲ್ಲಬೇಡಿ.
 • ಸುಗಮ ರಸ್ತೆಯಿಂದ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ಮೋಡಗಳಿಲ್ಲದ ಆಕಾಶ ಉತ್ತಮ ಪೈಲಟ್ಗಳನ್ನು ತರಬೇತುಗೊಳಿಸದು.ತೊಂದರೆರಹಿತ ಜೀವನ ಉತ್ತಮ ಮನುಷ್ಯರನ್ನು ರೂಪಿಸಲಾರದು. ಹೀಗಾಗಿ ನನಗೇ ಏಕೆ ಸಮಸ್ಯೆಗಳು ಎಂದು ಕೇಳಬೇಡಿ.

Saturday, March 21, 2015

ಯುಗಾದಿ ಹಬ್ಬದ ಶುಭಾಷಯಗಳು

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

ತಮಗು ತಮ್ಮ ಸಹ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ ತರಲಿ
ಎಲ್ಲಾ ಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....ಮಂಜುನಾಥ್.ಎಂ.ಕೆ.

☀☀

Tuesday, March 3, 2015

ವಿಶ್ವ ಮಾನವ ಸಂದೇಶ - ಕುವೆಂಪು

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ವಿಶ್ವಮಾನವ ಗೀತೆ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
-ಕುವೆಂಪು

ಪಂಚಮಂತ್ರ

 • ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.
 • ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.
 • ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'
 • ಮನುಜಮತವಿಶ್ವಪಥಸರ್ವೋದಯಸಮನ್ವಯಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".
 • ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

ಸಪ್ತಸೂತ್ರ

ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ

 1. "ಮನುಷ್ಯಜಾತಿ ತಾನೊಂದೆ ವಲಂ" ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
 2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
 3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
 4. 'ಮತ' ತೊಲಗಿ 'ಅಧ್ಯಾತ್ಮ' ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
 5. ಮತ 'ಮನುಜಮತ'ವಾಗಬೇಕು; ಪಥ 'ವಿಶ್ವಪಥ'ವಾಗಬೇಕು; ಮನುಷ್ಯ 'ವಿಶ್ವಮಾನವ'ನಾಗಬೇಕು.
 6. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.
 7. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

Thursday, February 26, 2015

ನನ್ನ ಬ್ಲಾಗ್ ಗಳ ವೀಕ್ಷಣಾ ವರದಿ

       ನನ್ನ ಬ್ಲಾಗ್ ಗಳನ್ನು ವೀಕ್ಷಿಸಿದ ಸಹೃದಯಿಗಳ ಸಂಖ್ಯೆ.  ದಿನಾಂಕ:25.02.2015ರವರೆಗೆ

Monday, February 23, 2015

ಕನ್ನಡ ಸಾಹಿತ್ಯ ಸಮ್ಮೇಳನಗಳು

ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
ಕ್ರ.ಸಂ. ಸಮ್ಮೇಳನದ ಸ್ಥಳ ನಡೆದ ವರ್ಷ ಸಮ್ಮೇಳನಾಧ್ಯಕ್ಷರು
1 ಬೆಂಗಳೂರು 1915 ಎಚ್.ವಿ.ನಂಜುಂಡಯ್ಯ
2 ಬೆಂಗಳೂರು 1916 ಎಚ್.ವಿ.ನಂಜುಂಡಯ್ಯ
3 ಮೈಸೂರು 1917 ಎಚ್.ವಿ.ನಂಜುಂಡಯ್ಯ
4 ಧಾರವಾಡ 1918 ಆರ್. ನರಸಿಂಹಾಚಾರ್
5 ಹಾಸನ 1919 ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ 1920 ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು 1921 ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ 1922 ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ 1923 ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ 1924 ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ 1925 ಬೆನಗಲ್ ರಾಮರಾವ್
12 ಬಳ್ಳಾರಿ 1926 ಫ.ಗು.ಹಳಿಕಟ್ಟಿ
13 ಮಂಗಳೂರು 1927 ಆರ್. ತಾತಾ
14 ಗುಲ್ಬರ್ಗಾ 1928 ಬಿ.ಎಂ.ಶ್ರೀಕಂಠಯ್ಯ
15 ಬೆಳಗಾವಿ 1929 ಮಾಸ್ತಿ ವೆಂಕಟೇಶ ಅಯ್ಯಂಗಾರ್
16 ಮೈಸೂರು 1930 ಆಲೂರು ವೆಂಕಟರಾವ್
17 ಕಾರವಾರ 1931 ಮಳಲಿ ತಿಮ್ಮಪ್ಪಯ್ಯ
18 ಮಡಿಕೇರಿ 1932 ಡಿ.ವಿ.ಗುಂಡಪ್ಪ
19 ಹುಬ್ಬಳ್ಳಿ 1933 ವೈ.ನಾಗೇಶಶಾಸ್ತ್ರೀ
20 ರಾಯಚೂರು 1934 ಪಂಜೆ ಮಂಗೇಶರಾಯ
21 ಮುಂಬಯಿ 1935 ಎನ್.ಎಸ್.ಸುಬ್ಬರಾವ್
22 ಜಮಖಂಡಿ 1937 ಬೆಳ್ಳಾವೆ ವೆಂಕಟನಾರಣಪ್ಪ
23 ಬಳ್ಳಾರಿ 1938 ರಂ.ರಾ.ದಿವಾಕರ್
24 ಬೆಳಗಾವಿ 1939 ಮುದವೀಡು ಕೃಷ್ಣರಾವ್
25 ಧಾರವಾಡ 1940 ವೈ.ಚಂದ್ರಶೇಖರ ಶಾಸ್ತ್ರೀ
26 ಹೈದ್ರಾಬಾದ್ 1941 ಎ.ಆರ್. ಕೃಷ್ಣಶಾಸ್ತ್ರೀ
27 ಶಿವಮೊಗ್ಗ 1943 ದ.ರಾ.ಬೇಂದ್ರೆ
28 ರಬಕವಿ 1944 ಎಸ್.ಎಸ್. ಬಸವನಾಳ
29 ಮದರಾಸು 1945 ಟಿ.ಪಿ.ಕೈಲಾಸಂ
30 ಹರಪನಹಳ್ಳಿ 1947 ಸಿ.ಕೆ. ವೆಂಕಟರಾಮಯ್ಯ
31 ಕಾಸರಗೋಡು 1948 ತಿರುಮಲೆ ತಾತಾಚಾರ್ಯ ಶರ್ಮಾ
32 ಗುಲ್ಬರ್ಗಾ 1949 ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ 1950 ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ 1951 ಎಂ.ಗೋವಿಂದಪೈ
35 ಬೇಲೂರು 1952 ಎಸ್.ಸಿ.ನಂದಿಮಠ
36 ಕುಮಟ 1954 ವಿ.ಸೀತಾರಾಮಯ್ಯ
37 ಮೈಸೂರು 1955 ಶಿವರಾಮಕಾರಂತ್
38 ಬೆಂಗಳೂರು 1955* ರಾಯಚೂರು
39 ಧಾರವಾಡ 1957 ಕೆ.ವಿ.ಪುಟ್ಟಪ್ಪ
40 ಬಳ್ಳಾರಿ 1958 ವಿ.ಕೃ.ಗೋಕಾಕ್
41 ಬೀದರ್ 1960 ಡಿ.ಎಲ್.ನರಸಿಂಹಾಚಾರ್
42 ಮಣಿಪಾಲ 1960 ಅ.ನ.ಕೃಷ್ಣರಾವ್
43 ಗದಗ 1961 ಕೆ.ಜಿ.ಕುಂದಣಗಾರ
44 ಸಿದ್ಧಗಂಗಾ 1963 ರಂ.ಶ್ರೀ.ಮುಗಳಿ
45 ಕಾರವಾರ 1923 ಕಡೆಂಗೋಡ್ಲು ಶಂಕರಭಟ್ಟ
46 ಕಡೆಂಗೋಡ್ಲು ಶಂಕರಭಟ್ಟ 1967 ಅ.ನೇ.ಉಪಾಧ್ಯೆ
47 ಬೆಂಗಳೂರು 1970 ದೇ.ಜವರೇಗೌಡ
48 ಮಂಡ್ಯ 1974 ಜಯದೇವಿ ತಾಯಿ ಲಿಗಾಡೆ
49 ಶಿವಮೊಗ್ಗ 1976 ಎಸ್.ವಿ.ರಂಗಣ್ಣ
50 ನವದೆಹಲಿ 1978 ಜಿ.ಪಿ.ರಾಜರತ್ನಂ
51 ಧರ್ಮಸ್ಥಳ 1979 ಎಂ.ಗೋಪಾಲಕೃಷ್ಣ ಅಡಿಗ
52 ಬೆಳಗಾವಿ 1980 ಬಸವರಾಜ ಕಟ್ಟಿಮನೀ
53 ಚಿಕ್ಕಮಗಳೂರು 1981 ಪು.ತಿ.ನರಸಿಂಹಾಚಾರ್
54 ಮಡಿಕೇರಿ 1981 ಶಂಬಾ ಜೋಶಿ
55 ಶಿರಸಿ 1982 ಗೊರೂರು ರಾಮಸ್ವಾಮಿ ಅಯ್ಯಂಗಾರ್
56 ಕೈವಾರ 1984 ಎ.ಎನ್. ಮೂರ್ತಿರಾವ್
57 ಬೀದರ್ 1835 ಹಾ.ಮಾ.ನಾಯಕ್
58 ಕಲಬುರ್ಗಿ 1987 ಸಿದ್ದಯ್ಯ ಪುರಾಣಿಕ್
59 ಹುಬ್ಬಳ್ಳಿ 1990 ಆರ್.ಸಿ. ಹಿರೇಮಠ್
60 ಮೈಸೂರು 1990 ಕೆ.ಎಸ್. ನರಸಿಂಹಸ್ವಾಮಿ
61 ದಾವಣಗೆರೆ 1992 ಜಿ.ಎಸ್. ಶಿವರುದ್ರಪ್ಪ
62 ಕೊಪ್ಪಳ 1992 ಸಿಂಪಿ ಲಿಂಗಣ್ಣ
63 ಮಂಡ್ಯ 1994 ಚದುರಂಗ
64 ಮುಧೋಳ 1995 ಎಚ್.ಎಲ್. ನಾಗೇಗೌಡ
65 ಹಾಸನ 1996 ಚನ್ನವೀರಕಣವಿ
66 ಮಂಗಳೂರು 1997 ಕಯ್ಯಾರ ಕಿಞಣ್ಣ ರೈ
67 ಕನಕಪುರ 1999 ಡಾ.ಎಸ್.ಎಲ್. ಬೈರಪ್ಪ
68 ಬಾಗಲಕೋಟೆ 2000 ಶಾಂತಾದೇವಿ ಮಾಳವಾಡ
69 ತುಮಕೂರು 2002 ಯು.ಆರ್. ಅನಂತಮೂರ್ತಿ
70 ಬೆಳಗಾವಿ 2003 ಡಾ.ಪಾಟೀಲ ಪುಟ್ಟಪ್ಪ
71 ಮೂಡಬಿದಿರೆ 2004 ಡಾ.ಕಮಲಾ ಹಂಪನಾ
72 ಬೀದರ್ 2006 ಶಾಂತರಸ ಹೆಂಬೇರಾಳು
73 ಶಿವಮೊಗ್ಗ 2006 ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74 ಉಡುಪಿ 2007 ಎಲ್.ಎಸ್.ಶೇಷಗಿರಿರಾವ್
75 ಚಿತ್ರದುರ್ಗ 2009 ಡಾ.ಎಲ್.ಬಸವರಾಜು
76 ಗದಗ 2010 ಡಾ.ಗೀತಾ ನಾಗಭೂಷಣ
77 ಬೆಂಗಳೂರು 2011 ಪ್ರೊ.ಜಿ.ವೆಂಕಟಸುಬ್ಬಯ್ಯ
78 ಗಂಗಾವತಿ 2011 ಡಾ. ಸಿ.ಪಿ. ಕೃಷ್ಣಕುಮಾರ್
79 ಬಿಜಾಪುರ  2013 ಕೋ. ಚೆನ್ನಬಸಪ್ಪ
80 ಕೊಡಗು 2014 ನಾ ಡಿಸೋಜ
81 ಶ್ರವಣಬೆಳಗೊಳ 2015 ಡಾ. ಸಿದ್ಧಲಿಂಗಯ್ಯ